ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ತಪ್ಪಾದ ನೀತಿಯಿಂದ ಕೂಡಿದೆ ಎಂದು ಅಪಾದಿಸಬಹುದೇ ಹೊರತು ಅದನ್ನು ಪ್ರಜಾಪ್ರತಿನಿಧಿ ಕಾಯಿದೆ ಅಡಿ ಭ್ರಷ್ಟಾಚಾರದ ಕೃತ್ಯ ಎನ್ನಲಾಗದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜಮೀರ್ ಅಹ್ಮದ್ ಅವರ ಆಯ್ಕೆಯನ್ನು ಪ್ರಶ್ನಿಸಿ ಸ್ಥಳೀಯ ಮತದಾರ ಶಶಾಂಕ್ ಜೆ. ಶ್ರೀಧರ್ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.
“ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳನ್ನು ಸಾಮಾಜಿಕ ಕಲ್ಯಾಣ ಯೋಜನೆಗಳು ಎಂದು ಪರಿಗಣಿಸಬೇಕು. ಆರ್ಥಿಕ ದೃಷ್ಟಿಯಿಂದ ಅವುಗಳನ್ನು ಮುನ್ನಡೆಸುವುದು ಸಾಧ್ಯವೇ ಎಂಬುದು ಬೇರೆ ವಿಚಾರವಾಗಿದೆ. ಈ ಯೋಜನೆಗಳ ಜಾರಿಯಿಂದ ಹೇಗೆ ರಾಜ್ಯದ ಬೊಕ್ಕಸ ದಿವಾಳಿಯಾಗಲಿದೆ, ಅದು ಹೇಗೆ ರಾಜ್ಯದ ದುರಾಡಳಿತಕ್ಕೆ ನಾಂದಿಯಾಡುತ್ತದೆ ಎಂಬುದನ್ನು ಇತರೆ ಪಕ್ಷಕಾರರು ತೋರಿಸಬೇಕಾಗುತ್ತದೆ. ಪ್ರಕರಣದ ವಾಸ್ತವಿಕ ಅಂಶಗಳು ಮತ್ತು ಸಂದರ್ಭ ಆಧರಿಸಿ ಅವುಗಳನ್ನು ತಪ್ಪಾದ ನೀತಿಗಳು ಎಂದು ವ್ಯಾಖ್ಯಾನಿಸುವ ಸಾಧ್ಯತೆ ಇದೆ. ಆದರೆ, ಅವುಗಳನ್ನು ಭ್ರಷ್ಟಾಚಾರದ ನಡೆ ಎನ್ನಲಾಗದು” ಎಂದು ನ್ಯಾಯಾಲಯ ಹೇಳಿದೆ.
ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ₹2,000, ಅನ್ನ ಭಾಗ್ಯದ ಅಡಿ 10 ಕೆಜಿ ಅಕ್ಕಿ, ಗೃಹ ಜ್ಯೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್, ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ನಿರುದ್ಯೋಗ ಪದವೀಧರ ಯುವ ಜನತೆಗೆ ಯುವನಿಧಿ ಯೋಜನೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.
ಕಣದಲ್ಲಿರುವ ಅಭ್ಯರ್ಥಿ ಅಥವಾ ಅವರ ಏಜೆಂಟ್ ಅಥವಾ ಇತರೆ ಯಾವುದೇ ವ್ಯಕ್ತಿಯು ಅಭ್ಯರ್ಥಿ ಅಥವಾ ಏಜೆಂಟ್ ಒಪ್ಪಿಗೆ ಪಡೆದು ಈ ರೀತಿಯ ಘೋಷಣೆ ಮಾಡಿದರೆ ಅದು ಭ್ರಷ್ಟಾಚಾರ ಕೃತ್ಯವಾಗಲಿದೆ ಎಂದು ನ್ಯಾಯಾಲಯ ಹೇಳಿದೆ. “ಪಕ್ಷವೊಂದು ತಾನು ಅಧಿಕಾರಕ್ಕೆ ಬಂದರೆ ನಿರ್ದಿಷ್ಟ ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳುವುದು ಭ್ರಷ್ಟಾಚಾರ ಕೃತ್ಯ ಎನ್ನಲಾಗದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ನೀತಿ ಉತ್ತಮವಾಗಿದೆಯೇ ಅಥವಾ ಉಚಿತ ಕೊಡುಗೆಗಳನ್ನು ನೀಡುವ ಪರಿಣಾಮವನ್ನು ಹೊಂದಿದೆಯೇ ಅಥವಾ ಇತರರಿಗೆ ಹಾನಿಯಾಗುವಂತೆ ಸಮಾಜದ ಒಂದು ವರ್ಗವನ್ನು ಸಮಾಧಾನಪಡಿಸುತ್ತದೆಯೇ ಎಂಬುದು ಚರ್ಚೆಯ ವಿಷಯವಾಗಿದೆ ಎಂಬುದನ್ನು ಮತದಾರರು ಪರಿಗಣಿಸಬೇಕಾಗಿದೆ” ಎಂದು ನ್ಯಾಯಾಲಯ ಹೇಳಿದೆ. “ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123ರ ಅಡಿ ಈ ಘೋಷಣೆಗಳನ್ನು ಭ್ರಷ್ಟಾಚಾರ ಕೃತ್ಯ ಎಂದು ಪರಿಗಣಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಕಾಂಗ್ರೆಸ್ ಪ್ರಣಾಳಿಕೆಯು ಭ್ರಷ್ಟಾಚಾರಕ್ಕೆ ಸಮ ಎಂಬ ಏಕೈಕ ಆಧಾರದಲ್ಲಿ ಜಮೀರ್ ಅಹ್ಮದ್ ಖಾನ್ ಆಯ್ಕೆ ಪ್ರಶ್ನಿಸಿರುವ ಅರ್ಜಿಯಲ್ಲಿ ಯಾವುದೇ ಕ್ರಮದ ಅಗತ್ಯ ಕಾಣುತ್ತಿಲ್ಲ ಎಂದು ವಜಾ ಮಾಡಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ವಕೀಲರಾದ ಎಂ ವಿ ಸುನಿಲ್, ಜಿ ಪ್ರಿಯಾಂಕಾ, ಜಿ ದೇವರಾಜೇಗೌಡ ವಾದಿಸಿದ್ದರು.
ವಕೀಲರಾದ ಶೇಖ್ ಇಸ್ಮಾಯಿಲ್ ಜಬಿವುಲ್ಲಾ, ಗೋಕುಲ್ ಕುಮಾರ್ ಎಸ್ ಒ, ಚಂದ್ರ ಎಲ್, ವಿಜಯ್ ಕುಮಾರ್ ವೈ ಎಚ್ ಮತ್ತು ಮೊಹಮದ್ ರಿಜ್ವಾನ್ ಅವರು ಜಮೀರ್ ಅಹ್ಮದ್ ಪ್ರತಿವಾದಿಗಳ ಪರವಾಗಿ ವಾದಿಸಿದ್ದರು.