
ಮಾರ್ಗಸೂಚಿ ದರ ಆಧರಿಸಿ ಸ್ವಾಧೀನಾನುಭವ ಪತ್ರ, ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರ, ಕಟ್ಟಡ ನಿರ್ಮಾಣ ಲೈಸನ್ಸ್ ಹಾಗೂ ನಕ್ಷೆ ಅನುಮೋದನೆಗೆ ನೆಲ ಬಾಡಿಗೆ ಸೇರಿದಂತೆ ಇತರೆ ಶುಲ್ಕಗಳನ್ನು ವಿಧಿಸಲು ಹೈಕೋರ್ಟ್ ಬಿಬಿಎಂಪಿಗೆ ಅವಕಾಶ ನೀಡಿದೆ.
ಶುಲ್ಕ ಸಂಗ್ರಹಕ್ಕೆ ಬಿಬಿಎಂಪಿಗೆ ಅಧಿಕಾರವಿಲ್ಲವೆಂದು ಏಕಸದಸ್ಯಪೀಠ ನೀಡಿದ್ದ ಜೂ.5ರ ತೀರ್ಪಿಗೆ ವಿಭಾಗೀಯಪೀಠ ತಡೆ ನೀಡಿದೆ.
ಆದರೆ, ಏಕಸದಸ್ಯಪೀಠದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಬಿಬಿಎಂಪಿ ವಿಫಲವಾದರೆ, ನಾನಾ ಶುಲ್ಕಗಳ ರೂಪದಲ್ಲಿ ಈಗಾಗಲೇ ಸಂಗ್ರಹಿಸಲಾದ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ ಎಂದು ವಿಭಾಗೀಯಪೀಠ ಸ್ಪಷ್ಟಪಡಿಸಿದೆ.
ಜೂ.5ರಂದು ಏಕಸದಸ್ಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನಂತರ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರಿದ್ದ ವಿಭಾಗೀಯಪೀಠವು ಈ ಮಧ್ಯಂತರ ಆದೇಶ ನೀಡಿದೆ.
ಸಪ್ತಗಿರಿ ಶೆಲ್ಟರ್ಸ್ ಮತ್ತು ಹಲವಾರು ವೈಯಕ್ತಿಕ ಆಸ್ತಿ ಮಾಲೀಕರು ಮತ್ತು ಡೆವಲಪರ್ಸ್ ಸಲ್ಲಿಸಿದ್ದ ಅರ್ಜಿಗಳನ್ನು ವಿಲೇವಾರಿ ಮಾಡುವ ವೇಳೆ ಏಕಸದಸ್ಯ ಪೀಠವು, ಬೆಂಗಳೂರಿನ ನಾಗರಿಕರು ಮತ್ತು ಬಿಲ್ಡರ್‌ಗಳಿಂದ ನೆಲದ ಬಾಡಿಗೆ ಸೇರಿದಂತೆ ಹಲವು ಶುಲ್ಕಗಳನ್ನು ವಿಧಿಸಲು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಮತ್ತು ಇತರೆ ಕೆಲವು ಕಾನೂನು (ತಿದ್ದುಪಡಿ) ಕಾಯಿದೆ 2021 ಹಾಗೂ 2023 ಗೆ ಮಾಡಿದ್ದ ತಿದ್ದುಪಡಿಗಳನ್ನು ರದ್ದುಗೊಳಿಸುವ ಮೂಲಕ ಮಹತ್ವದ ತೀರ್ಪು ನೀಡಿತ್ತು.
ಅಲ್ಲದೆ, ‘‘ಬಿಬಿಎಂಪಿಯಿಂದ ಕಟ್ಟಡ ನಿರ್ಮಾಣ ಯೋಜನೆಯ ಮಂಜೂರಾತಿಗೆ ಸಂಬಂಧಿಸಿದ ನಿರ್ಮಾಣಗಳು ಮತ್ತು ಸೇವೆಗಳ ವ್ಯಾಪ್ತಿಯನ್ನು ಅವಲಂಬಿಸಿ ಏಕರೂಪದ ದರವನ್ನು ಸಂಗ್ರಹಿಸಬಹುದು. ಆದರೆ, ಅದನ್ನು ಆಸ್ತಿಯ ಮಾರುಕಟ್ಟೆ ಮೌಲ್ಯ ಅಥವಾ ಕರ್ನಾಟಕ ಮುದ್ರಾಂಕ ಕಾಯಿದೆಯಡಿಯಲ್ಲಿ ಸರಕಾರವು ಸ್ಟಾಂಪ್ ಡ್ಯೂಟಿ ಸಂಗ್ರಹಕ್ಕಾಗಿ ಸೂಚಿಸಲಾದ ವಿವಿಧ ಪ್ರದೇಶಗಳಲ್ಲಿನ ಆಸ್ತಿಗಳ ಮಾರ್ಗಸೂಚಿ ದರದೊಂದಿಗೆ ಸಂಯೋಜಿಸಿರುವುದು ಸರಿಯಾದ ಕ್ರಮವಲ್ಲ’’ಎಂದು ಹೇಳಿದೆ.