ಕೆಪಿಸಿಎಲ್‌ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್ ಆಯ್ಕೆ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್‌

ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿನ ನಕಾರಾತ್ಮಕ ಅಂಕಗಳ ಕುರಿತಂತೆ ಹೊರಡಿಸಲಾದ ಆದೇಶ ಪ್ರಶ್ನಿಸಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ವಿಭಾಗೀಯ ಪೀಠ.
Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC
Published on

ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ (ಕೆಪಿಸಿಎಲ್‌) 404 ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2024ರ ಮೇ 8ರಂದು ಪ್ರಕಟಿಸಿದ್ದ ಆಯ್ಕೆ ಪಟ್ಟಿ ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್‌, ಶೀಘ್ರವೇ ಮರು ಪರೀಕ್ಷೆ ನಡೆಸುವಂತೆ ಕೆಪಿಸಿಎಲ್‌ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಬುಧವಾರ ನಿರ್ದೇಶಿಸಿದೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿನ ನಕಾರಾತ್ಮಕ ಅಂಕಗಳ ಕುರಿತಂತೆ ಹೊರಡಿಸಲಾದ ಆದೇಶ ಪ್ರಶ್ನಿಸಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬೆಂಗಳೂರಿನ ಎನ್‌ ನವೀನ್‌ ಕುಮಾರ್‌ ಸೇರಿದಂತೆ ನಾಲ್ವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.

“2024ರ ಫೆಬ್ರವರಿ 18 ರಂದು ನಡೆಸಲಾದ ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕು ಮತ್ತು ಒಂದು ವೇಳೆ ನಕಾರಾತ್ಮಕ ಮಾರ್ಕಿಂಗ್‌ ಇದ್ದರೆ ಈ ಬಗ್ಗೆ ಅಭ್ಯರ್ಥಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು” ಎಂದು ಪೀಠವು ಕೆಪಿಸಿಎಲ್‌ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಿದೆ.

ಪ್ರಕರಣದ ಹಿನ್ನೆಲೆ: ಸಿವಿಲ್‌, ಮೆಕ್ಯಾನಿಕಲ್‌ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗಗಳಲ್ಲಿನ ಎ ಇ ಹಾಗೂ ಜೆ ಇ ಸೇರಿದಂತೆ 404 ಹುದ್ದೆಗಳ ಭರ್ತಿಗೆ ಕೆಪಿಸಿಎಲ್‌ 2017ರ ಆಗಸ್ಟ್ 3ರಂದು ಅಧಿಸೂಚನೆ ಹೊರಡಿಸಿತ್ತು. ಇದಕ್ಕಾಗಿ ತಾಂತ್ರಿಕ ಹಾಗೂ ಕನ್ನಡ ಪತ್ರಿಕೆಗಳ ಪರೀಕ್ಷೆಯನ್ನು 2018ರ ಜನವರಿಯಲ್ಲಿ ನಡೆಸಲಾಗಿತ್ತು.

ಏತನ್ಮಧ್ಯೆ, ಕೆಪಿಸಿಎಲ್‌ 2018ರಲ್ಲಿ ನಡೆಸಿದ ಎಲ್ಲ ಪರೀಕ್ಷೆಗಳನ್ನು ರದ್ದುಗೊಳಿಸಿ ಹೊಸದಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಹೊಣೆಯನ್ನು ಕೆಇಎ ಹೆಗಲಿಗೆ ವಹಿಸಲಾಗಿತ್ತು.

ಇದರ ಅನ್ವಯ ಕೆಇಎ, 2022ರ ಫೆಬ್ರವರಿಯಲ್ಲಿ ಪರೀಕ್ಷೆಗಳನ್ನು ನಡೆಸಿತ್ತು. ಆಗ ಕನ್ನಡ ಪ್ರಶ್ನೆ ಪತ್ರಿಕೆಗೆ 150 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ವೇಳೆ ಹೊಸದಾಗಿ ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಮತ್ತೊಂದು ಸುತ್ತಿನ ಕಾನೂನು ಹೋರಾಟದ ಬಳಿಕ ಪರಿಷ್ಕೃತ ಆಯ್ಕೆಪಟ್ಟಿ ಪ್ರಕಟಿಸಲಾಗಿತ್ತು.

ನೇಮಕಾತಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ ಎನ್ನುವ ಕಾರಣಕ್ಕೆ ವಿಭಾಗೀಯ ಪೀಠ 2023ರಲ್ಲಿ, ತಾತ್ಕಾಲಿಕ ನೇಮಕಾತಿ ಆದೇಶ ನೀಡುವಂತೆ ಮಧ್ಯಂತರ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com