

ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ 2021ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಎಂ ಕೆ ಪ್ರಾಣೇಶ್ ಅವರು ಆಯ್ಕೆಯಾಗಿದ್ದನ್ನು ಶುಕ್ರವಾರ ಅಸಿಂಧುಗೊಳಿಸಿರುವ ಕರ್ನಾಟಕ ಹೈಕೋರ್ಟ್, ಕಾಂಗ್ರೆಸ್‌ನ ಎ ವಿ ಗಾಯತ್ರಿ ಶಾಂತೇಗೌಡ ವಿಜೇತ ಎಂದು ಘೋಷಿಸಿದೆ.
ಮೂಡಿಗೆರೆ, ಎನ್ ಆರ್ ಪುರ ಶೃಂಗೇರಿ ಮತ್ತು ಕೊಪ್ಪ ಟೌನ್ ಪಂಚಾಯಿತಿಗಳ 12 ನಾಮನಿರ್ದೇಶಿತ ಸದಸ್ಯರು ಚಲಾಯಿಸಿದ್ದ ಮತಗಳನ್ನು ಪರಿಗಣಸಿ ಎಂ ಕೆ ಪ್ರಾಣೇಶ್ ಅವರು ವಿಜೇತ ಅಭ್ಯರ್ಥಿ ಎಂದು ಘೋಷಿಸಿದ್ದ ಕೇಂದ್ರ ಚುನಾವಣಾ ಆಯೋಗದ ಕ್ರಮವನ್ನು ಅಮಾನ್ಯಗೊಳಿಸಬೇಕು ಹಾಗೂ ತಮ್ಮನ್ನು ವಿಜೇತೆ ಘೋಷಿಸಬೇಕು ಎಂದು ಕೋರಿ ಗಾಯತ್ರಿ ಶಾಂತೇಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಚಲಾವಣೆಯಾದ ನಾಮ ನಿರ್ದೇಶಿತ ಸದಸ್ಯರ ಮತಗಳನ್ನು ಕೈಬಿಟ್ಟು, ಉಳಿಕೆ ಮತಗಳನ್ನು ಮರು ಎಣಿಕೆ ಮಾಡಿದ ನಂತರ ಗಾಯತ್ರಿಗೆ 1,183 ಮತಗಳು ಹಾಗೂ ಪ್ರಾಣೇಶ್‌ಗೆ 1,174 ಚಲಾವಣೆಯಾಗಿವೆ. ಇದನ್ನು ಪರಿಗಣಿಸಿರುವ ಹೈಕೋರ್ಟ್, ಗಾಯತ್ರಿ ಶಾಂತೇಗೌಡ ಅವರನ್ನು ವಿಜೇತೆ ಎಂದು ಘೋಷಿಸಿ ಇದೀಗ ಆದೇಶಿಸಿದೆ. ಅಲ್ಲದೆ, ಈ ಆದೇಶ ಪ್ರತಿಯನ್ನು ವಿಧಾನ ಪರಿಷತ್ ಸಭಾಪತಿ ಅವರಿಗೆ ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್ಗೆ ನಿರ್ದೇಶಿಸಿದೆ.
ಇದರಿಂದ ಗಾಯತ್ರಿ ಶಾಂತೇಗೌಡ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಲಿದ್ದಾರೆ. ಅವರ ಅಧಿಕಾರವಧಿ ಸುಮಾರು ಒಂದೂವರೆ ವರ್ಷ ಇರಲಿದೆ.
ಪ್ರಕರಣದ ಹಿನ್ನೆಲೆ: 2021ರಲ್ಲಿ ನಡೆದಿದ್ದ ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಎಂ ಕೆ ಪ್ರಾಣೇಶ್ 1,182 ಮತಗಳನ್ನು ಮತ್ತು ಗಾಯಿತ್ರಿ ಅವರು 1,176 ಮತಗಳನ್ನು ಪಡೆದಿದ್ದರು. ಎಂ ಕೆ ಪ್ರಾಣೇಶ್ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದ ಗಾಯತ್ರಿ ಶಾಂತೇಗೌಡ ಅವರು, ಮೂಡಿಗೆರೆ, ಎನ್ ಆರ್ ಪುರ. ಶೃಂಗೇರಿ ಮತ್ತು ಕೊಪ್ಪ ಟೌನ್ ಪಂಚಾಯಿತಿಗಳ 12 ನಾಮನಿರ್ದೇಶಿತ ಸದಸ್ಯರಿಗೆ ಕಾನೂನು ಬಾಹಿರವಾಗಿ ಮತದಾನದ ಹಕ್ಕು ನೀಡಿರುವುದರಿಂದ ಪ್ರಾಣೇಶ್ ಗೆಲುವು ಸಾಧಿಸಿದ್ದಾರೆ. ಆದರೆ, ಮೂಲತಃ ಸಂವಿಧಾನದ ನಿಯಮಗಳಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಎಂಎಲ್‌ಸಿ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಅವರ ಆಯ್ಕೆ ಅಕ್ರಮ ಹಾಗೂ ಕಾನೂನುಬಾಹಿರ. ಹಾಗಾಯೇ, ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಘೋಷಿಸಬೇಕು ಎಂದು ಕೋರಿದ್ದರು.
ಈ ಮನವಿ ಪುರಸ್ಕರಿಸಿದ್ದ ಹೈಕೋರ್ಟ್ ಮತ್ತೊಂದು ಏಕ ಸದಸ್ಯ ಪೀಠವು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು 2022ರ ಮಾರ್ಚ್ 11ರಂದು ತೀರ್ಪು ನೀಡಿತ್ತು.
ಈ ತೀರ್ಪು ಪ್ರಶ್ನಿಸಿ ಎಂ ಕೆ ಪ್ರಾಣೇಶ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ತೀರ್ಪುನ್ನು ಎತ್ತಿಹಿಡಿದಿತ್ತು. ನಂತರ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಸೂಚನೆಯಂತೆ ಚುನಾವಣೆಯಲ್ಲಿ ಚಲಾವಣೆಯಾದ ನಾಮ ನಿರ್ದೇಶಿತ ಸದಸ್ಯರಿಗೆ ಮತಗಳನ್ನು ಕೈಬಿಟ್ಟು, ಉಳಿಕೆ ಮತಗಳನ್ನು ಮರು ಎಣಿಕೆ ಮಾಡಿ ಫಲಿತಾಂಶ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದರು.
ಲಕೋಟೆಯಲ್ಲಿ ಸಲ್ಲಿಸಿದ ಮಾಹಿತಿಯಂತೆ ಗಾಯತ್ರಿ ಅವರಿಗೆ 1,183 ಮತಗಳು ಹಾಗೂ ಪ್ರಾಣೇಶ್ ಅವರಿಗೆ 1,174 ಚಲಾವಣೆಯಾಗಿದ್ದವು. ಅದನ್ನು ಪರಿಗಣಿಸಿರುವ ಹೈಕೋರ್ಟ್ ಇದೀಗ ಗಾಯತ್ರಿ ಶಾಂತೇಗೌಡ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿದೆ.