
ಕೈಗಾರಿಕಾ ಮೂಲಸೌಕರ್ಯ ಯೋಜನೆಗೆ ರಾಜ್ಯ ಸರ್ಕಾರವು ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವ ಅಗರ ಟೆಕ್ ಜೋನ್‌ಗೆ ಮಂಜೂರು ಮಾಡಿದ್ದ 100 ಎಕರೆ ಭೂಮಿಯನ್ನು ಅಡಮಾನ ಇಟ್ಟುಕೊಂಡು ಕೋಟ್ಯಂತರ ರೂಪಾಯಿ ಸಾಲ ನೀಡಿದ ಆರೋಪದ ಮೇಲೆ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ (ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್) ವಿರುದ್ಧ ತನಿಖಾ ಸಂಸ್ಥೆಯು ಬಲವಂತದ ಕ್ರಮದಂಥ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದಾಖಲಾಗಿರುವ ನಕಲಿ ದಾಖಲೆ ಸೃಷ್ಟಿ, ಒಳಸಂಚು ಮತ್ತಿತರ ಆರೋಪದ ಮೇಲೆ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸಮ್ಮಾನ್ ಕ್ಯಾಪಿಟಲ್‌ಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಯಾವುದೇ ಬಲವಂತ ಕ್ರಮಕೈಗೊಳ್ಳುವ ಆತುರದ ನಿರ್ಧಾರಕ್ಕೆ ಮುಂದಾಗಬಾರದು. ತನಿಖೆ ಮುಂದುವರಿಸಲು ತನಿಖಾ ಸಂಸ್ಥೆ ಸ್ವತಂತ್ರವಾಗಿದ್ದು, ಸಮ್ಮಾನ್ ಕ್ಯಾಪಿಟಲ್ ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿದೆ.
ಅರ್ಜಿಗೆ ಆಕ್ಷೇಪಣೆ ಸಲ್ಲಿಸುವವರೆಗೆ ಅರ್ಜಿದಾರರ ಹಿತಾಸಕ್ತಿಯನ್ನು ಕಾಪಾಡುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಸಮ್ಮಾನ್ ಕ್ಯಾಪಿಟಲ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದಿಸಿದರು. ವಕೀಲ ಎಂ ಚಿಂತನ್ ಚಿನ್ನಪ್ಪ ವಕಾಲತ್ತು ಹಾಕಿದ್ದಾರೆ.
ಪ್ರಕರಣದ ಹಿನ್ನೆಲೆ:
ಅಗರ ಟೆಕ್‌ಜೋನ್ ದಾಖಲಿಸಿರುವ ದೂರಿನಲ್ಲಿ ತಿಳಿಸಿರುವ ಮಾಹಿತಿಯಂತೆ, 2007ರ ಜುಲೈ 2ರಂದು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರವು ಕೈಗಾರಿಕಾ ಮೂಲಸೌಕರ್ಯ ಯೋಜನೆ ಸಲುವಾಗಿ ಎಚ್‌ಎಸ್‌ಆರ್ ಲೇಔಟ್‌ನ ಅಗರ, ಜಕ್ಕಸಂದ್ರ ಗ್ರಾಮಗಳ ವಿವಿಧ ಸರ್ವೇ ನಂಬರ್‌ಗಳಲ್ಲಿ 63 ಎಕರೆ ಮತ್ತು 37.5 ಎಕರೆ ಜಮೀನನ್ನು ಅಗರ ಟೆಕ್‌ಜೋನ್‌ಗೆ 11 ವರ್ಷಗಳ ಗುತ್ತಿಗೆ ಕರಾರಿನ ಮೂಲಕ ಮಂಜೂರು ಮಾಡಿತ್ತು. ಆನಂತರ 2010ರ ಸೆಪ್ಟೆಂಬರ್ 6ರಂದು ಕೆಐಎಡಿಬಿಯು ರೆಸ್ಟಿಫಿಕೇಶನ್ ಕರಾರು ಮಾಡಿಕೊಟ್ಟಿದೆ. ಇದಕ್ಕೆ ಅಗರ ಟೆಕ್‌ಜೋನ್ ಕಡೆಯಿಂದ ಹಣ ಪಾವತಿಸಲಾಗಿದೆ. ಈ ಸಂಬಂಧ ಎರಡು ತಿಂಗಳ ಹಿಂದೆ ಹೊಸ ಯೋಜನೆ ಸಲುವಾಗಿ ಸಾಲ ಪಡೆಯಲು ಸಂಸ್ಥೆಯು ಸೆರ್ಸಾಯಿ (ಸಿಇಆರ್‌ಎಸ್‌ಎಐ) ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಸದರಿ ನಮ್ಮ ಆಸ್ತಿಯ ಮೇಲೆ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಬ್ಯಾಂಕಿನಿಂದ ನಮನ್ ಗ್ರೂಪ್ ಕಂಪನಿಗೆ ಸಂಬಂಧಿಸಿದ ಸುಜಯ್ ರೆಸಾರ್ಟ್ಸ್ ಮತ್ತು ಟೌನ್‌ಶಿಪ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 2023ರ ಆಗಸ್ಟ್ 10ರಂದು ಎರಡು ಬಾರಿ ಕ್ರಮವಾಗಿ ₹600 ಕೋಟಿ ಮತ್ತು ₹305 ಕೋಟಿಗಳಿಗೆ ಅಡಮಾನ ಮಾಡಿಕೊಟ್ಟಿದ್ದಾರೆ. ಆದರೆ, ನಿಖರವಾಗಿ ಎಷ್ಟು ಸಾಲ ಪಡೆಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ.
ಮುಂದುವರೆದು, ಸುಜಯ್ ರೆಸಾರ್ಟ್ಸ್ ಮತ್ತು ಟೌನ್‌ಶಿಪ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಮತ್ತು ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನವರು ಟೆಕ್‌ಜೋನ್ ಸಂಸ್ಥೆಯ ನಿರ್ದೇಶಕರು ಅಥವಾ ಅಧಿಕೃತ ಪ್ರತಿನಿಧಿ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಈ ಮೂಲಕ ನಮ್ಮ ಸಂಸ್ಥೆಗೆ ಆರ್ಥಿಕ, ವ್ಯವಹಾರಿಕವಾಗಿ ಕಪ್ಪು ಮಸಿ ಬಳಿಯುವ ಕೆಲಸವನ್ನು ನಮನ್ ಗ್ರೂಪ್‌ನ ಮುಖ್ಯಸ್ಥ ಜಯೇಶ್ ಅರವಿಂದ್ ಶಾ, ಅಲ್ಪೇಶ್ ರವಿಚಂದ್ರ ಗಾಂಧಿ, ಪ್ರಿದರ್ಶಿ ಜುಗಲ್ ಕಿಶೋರ್ ಮೆಹ್ತಾ, ಸುಜಯ್ ರೆಸಾರ್ಟ್ಸ್ ಮತ್ತು ಟೌನ್‌ಶಿಪ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾದ ಅರವಿಂದ್ ನರೇಂದ್ರ ಮೋರೆ, ಕಿರಣ್ ತಾನಾಜಿ ಮಾದಯೆ ಮತ್ತು ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವ್ಯವಸ್ಥಾಪಕ ಅಧಿಕಾರಿ/ಬ್ಯಾಂಕ್ ಅಧಿಕಾರಿಗಳು ಮಾಡಿದ್ದಾರೆ ಎನ್ನಲಾಗಿದೆ. ಈ ದೂರಿನ ಆಧಾರದಲ್ಲಿ ಈ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 318(4), 319(2), 336(2), 336(3), 338, 339, 340(2) ಅಡಿ ಪ್ರಕರಣ ದಾಖಲಿಸಲಾಗಿದೆ.