
ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆರು ತಿಂಗಳಲ್ಲಿ ಮರ ಪ್ರಾಧಿಕಾರವನ್ನು ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಮರ ಪ್ರಾಧಿಕಾರ ರಚನೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಯೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
“ಸರ್ಕಾರದ ವಕೀಲರು ಸಲ್ಲಿಸಿರುವ ಮೆಮೊ ಪ್ರಕಾರ ಉತ್ತರ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ, ಉಡುಪಿ, ಬೆಳಗಾವಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಮರ ಪ್ರಾಧಿಕಾರ ರಚಿಸಿ, ಅವುಗಳಿಗೆ ಮುಖ್ಯಸ್ಥರು ಹಾಗೂ ಸದಸ್ಯರನ್ನು ನೇಮಕ ಮಾಡಿ 2018ರ ಜನವರಿ 12ರಂದು ಸರ್ಕಾರ ಆದೇಶಿಸಿದೆ. ಹೀಗಾಗಿ, ಉಳಿದಂತೆ ಯಾವ್ಯಾವ ಸ್ಥಳೀಯ ಸಂಸ್ಥೆಯಲ್ಲಿ ಮರ ಪ್ರಾಧಿಕಾರ ರಚನೆ ಮಾಡಿಲ್ಲವೋ, ಅಲ್ಲಿ ಮುಂದಿನ ಆರು ತಿಂಗಳ ಒಳಗೆ ಮರ ಪ್ರಾಧಿಕಾರ ರಚಿಸಬೇಕು. ಅವುಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಬೇಕು. ನೇಮಕಗೊಂಡ ಮರಗಳ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಸದಸ್ಯರು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು” ಎಂದು ಪೀಠ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಪ್ರದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 1976ರ ಡಿಸೆಂಬರ್ 4ರಂದು ಕರ್ನಾಟಕ ಮರ ಸಂರಕ್ಷಣೆ ಕಾಯಿದೆ ಜಾರಿಗೊಳಿಸಿತ್ತು. ಈ ಕಾಯಿದೆ 1976ರ ಸೆಕ್ಷನ್ 3 ಅನ್ವಯ ಪ್ರತಿ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ಮರ ಪ್ರಾಧಿಕಾರ ರಚಿಸಿ ರಾಜ್ಯ ಸರ್ಕಾರ ನೋಟಿಫಿಕೇಷನ್ ಹೊರಡಿಸಬೇಕು. ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿ ಪ್ರಕಾರ ಮಂಗಳೂರು ನಗರ ಹೊರತುಪಡಿಸಿ, ಮತ್ಯಾವುದೇ ನಗರಸಭೆ, ಪಟ್ಟಣ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲಿ ಮರ ಪ್ರಾಧಿಕಾರ ರಚಿಸಿಲ್ಲ. ಇನ್ನೂ ಮಂಗಳೂರು ಮರ ಪ್ರಾಧಿಕಾರವು ಕಾನೂನಿನ್ವಯ ತ್ರೈಮಾಸಿಕ ಸಭೆ ನಡೆಸುತ್ತಿಲ್ಲ” ಎಂದು ಪೀಠದ ಗಮನಕ್ಕೆ ತಂದರು.
ಈ ವಾದ ಪರಿಗಣಿಸಿದ ಪೀಠವು “ಕರ್ನಾಟಕ ಮರ ಸಂರಕ್ಷಣೆ ಕಾಯಿದೆ ಪ್ರಕಾರ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಸಿರು ಪ್ರದೇಶ ಸಂರಕ್ಷಣೆ ಮತ್ತು ಸುಸ್ಥಿರತೆ ಕಾಪಾಡಲು ಮರ ಪ್ರಾಧಿಕಾರ ರಚನೆ ಮಾಡುವುದು ಕಡ್ಡಾಯ. ಇದನ್ನು ಜಾರಿಗೊಳಿಸದ ಕಾರಣ ರಾಜ್ಯದಲ್ಲಿ ಹಸಿರು ಹೊದಿಕೆ ಮತ್ತು ಪರಿಸರ ಸುಸ್ಥಿರತೆಯ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ, ರಾಜ್ಯ ಎಲ್ಲಾ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯಲ್ಲಿ ಮರ ಪ್ರಾಧಿಕಾರ ರಚನೆ ಮಾಡಬೇಕಿದೆ” ಎಂದು ಅಭಿಪ್ರಾಯಪಟ್ಟಿದೆ.