Karnataka High Court and doctor
Karnataka High Court and doctor

ಅಂತಾರಾಷ್ಟ್ರೀಯ ಚೆಸ್‌ ಆಟಗಾರ್ತಿ ಸಂಜನಾಗೆ ₹10 ಲಕ್ಷ ಪರಿಹಾರ ಪಾವತಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅರ್ಹತೆ ಹೊಂದಿದ್ದರೂ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಸಿಗದಿದ್ದರಿಂದ ಸಂಜನಾ ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾದಡಿ ₹11 ಲಕ್ಷ ಪಾವತಿಸಿ ಸೀಟು ಪಡೆದಿದ್ದಾರೆ. ಈ ಹಣ ಮರುಪಾವತಿಸುವಂತೆ ಕೆಇಎಗೆ ಹೈಕೋರ್ಟ್‌ ನಿರ್ದೇಶಿಸಿದೆ.
Published on

“ಕ್ರೀಡಾ ಕೋಟಾದಡಿ ಅರ್ಹತೆ ಹೊಂದಿದ್ದರೂ ವೈದ್ಯಕೀಯ ಸೀಟು ನೀಡದೆ ಹೋದ ಕಾರಣಕ್ಕೆ ಅಂತಾರಾಷ್ಟ್ರೀಯ ಚೆಸ್‌ ಪಟು ಸಂಜನಾ ರಘುನಾಥ್‌ಗೆ ₹10 ಲಕ್ಷ ಪರಿಹಾರ ಪಾವತಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿಯಾಗಿರುವ ಸಂಜನಾ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ಮಾನ್ಯ ಮಾಡಿದೆ.

ಅರ್ಜಿದಾರರು ಕ್ರೀಡಾ ಕೋಟಾದಡಿ ಸೀಟು ಪಡೆಯುವ ಅರ್ಹತೆ ಹೊಂದಿದ್ದು, ಪಿ-1 ಶ್ರೇಣಿಗೆ ಅರ್ಹರಿದ್ದಾರೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಪ್ಪಾಗಿ ಅವರಿಗೆ ಪಿ-5 ಶ್ರೇಣಿ ನೀಡಿದೆ. ನಿಯಮಗಳ ಪ್ರಕಾರ ಈ ವರ್ಗೀಕರಣ ಊರ್ಜಿತವಾಗದು ಎಂದು ಪೀಠ ಹೇಳಿದೆ.

ಸರ್ಕಾರಿ ಕೋಟಾದಡಿ ಸೀಟು ಸಿಗದೇ ಹೋದ ಕಾರಣ ಅವರು ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾದಡಿ ಅಂದಾಜು ₹11 ಲಕ್ಷ ಪಾವತಿಸಿದ್ದಾರೆ. ಹಾಗಾಗಿ, ಅವರಿಗೆ ರಾಜ್ಯ ಸರ್ಕಾರ ಆರು ವಾರಗಳಲ್ಲಿ ₹10 ಲಕ್ಷ ಪರಿಹಾರದ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಂ ಪಿ ಶ್ರೀಕಾಂತ್‌ ವಾದ ಮಂಡಿಸಿದರು.

ಪ್ರಕರಣದ ಹಿನ್ನೆಲೆ: ಹೆಸರಾಂತ ಚೆಸ್‌ ಆಟಗಾರ್ತಿ ಸಂಜನಾ ರಘುನಾಥ್‌ ಹಲವು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚೆಸ್‌ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. 2019ರಲ್ಲಿ 13 ವರ್ಷದೊಳಗಿನ 32ನೇ ರಾಷ್ಟ್ರೀಯ ಬಾಲಕಿಯರ ಚೆಸ್‌ ಚಾಂಪಿಯನ್‌ಷಿಪ್‌, ಏಷ್ಯಾ ಯುವ ಚೆಸ್‌ ಚಾಂಪಿಯನ್‌ಷಿಪ್‌ ಹಾಗೂ ಕಾಮನ್‌ ವೆಲ್ತ್‌ ಚೆಸ್‌ ಚಾಂಪಿಯನ್‌ಷಿಪ್‌ಗಳಲ್ಲಿ ಭಾಗವಹಿಸಿದ್ದರು. ಅಖಿಲ ಭಾರತ ಚೆಸ್‌ ಫೆಡರೇಷನ್‌ನಲ್ಲಿ ಪದಕ ಜಯಸಿದ್ದರು.

ವೈದ್ಯೆಯಾಗುವ ಆಸೆ ಹೊಂದಿರುವ ಅವರು 2022-23ನೇ ಸಾಲಿನ ನೀಟ್‌ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿ ಗಳಿಸಿದ್ದರು. ಆದರೆ, ಕೆಇಎ ಅವರ ಅರ್ಹತೆಗೆ ತಕ್ಕಂತೆ ಶ್ರೇಣಿ ನೀಡದ ಕಾರಣ ಸೀಟು ವಂಚಿತರಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Attachment
PDF
Sanjana Raghunath Vs KEA.pdf
Preview
Kannada Bar & Bench
kannada.barandbench.com