
ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಅಧ್ಯಕ್ಷ್ಯ ಡಾ.ಮಹೇಶ್ ಜೋಶಿ ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಜೀವ ಬೆದರಿಕೆಯಿರುವ ಹಿನ್ನೆಲೆಯಲ್ಲಿ ತಮಗೆ ಪೊಲೀಸ್ ಭದ್ರತೆ ಮತ್ತು ಗನ್ ಮ್ಯಾನ್ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮಹೇಶ್ ಜೋಶಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಜೋಶಿ ಪರ ಹಿರಿಯ ವಕೀಲ ಎಸ್ ಬಸವರಾಜ್ ಅವರು “ಮಹೇಶ್ ಜೋಶಿ ಅವರು 2021ರಿಂದ ಕಸಾಪದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಿದ ನಂತರ ಅರ್ಜಿದಾರರಿಗೆ ಜೀವ ಬೆದರಿಕೆಯ ಆಡಿಯೋ-ವಿಡಿಯೋ ಕರೆಗಳು ಬರುತ್ತಿವೆ. ಇದರಿಂದ ಅರ್ಜಿದಾರರಿಗೆ ಜೀವಕ್ಕೆ ಅಪಾಯವಿದ್ದು, ಪೊಲೀಸ್ ರಕ್ಷಣೆ ಒದಗಿಸಬೇಕು. ದಿನದ 24 ಗಂಟೆಗಳ ಕಾಲ ಗನ್ ಮ್ಯಾನ್ ಜೊತೆಗಿರುವ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸಬೇಕು” ಎಂದು ಕೋರಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಬೆದರಿಕೆ ವಿಶ್ಲೇಷಣಾ ವರದಿಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಇದನ್ನು ಆಧರಿಸಿ ನ್ಯಾಯಾಲಯವು ನಿರ್ಧಾರ ಕೈಗೊಳ್ಳಬಹುದು” ಎಂದರು.
ಇದನ್ನು ಪರಿಗಣಿಸಿದ ಪೀಠವು ಅರ್ಜಿದಾರರಿಗೆ ಜೀವ ಬೆದರಿಕೆ ಇರುವ ಬಗ್ಗೆ ಬೆದರಿಕೆ ವಿಶ್ಲೇಷಣಾ ವರದಿಯನ್ನು ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು.