ರಾಜ್ಯದಲ್ಲಿ ನಕಲಿ ಅಥವಾ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡವರ ಹಾಗೂ ಅವುಗಳನ್ನು ವಿತರಿಸಿದವರ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಜ್ಯ ಎಸ್ಸಿ-ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ ಪ್ರಧಾನ ಕಾರ್ಯದರ್ಶಿ ಮಾರಪ್ಪ ನಾಯಕ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ್ ರಾವ್ ಹಾಗೂ ನ್ಯಾಯಮೂರ್ತಿ ಸಿ ಎಂ ಜೋಶಿ ಅವರನ್ನು ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲೆ ಅಶ್ವಿನಿ ಓಬುಳೇಶ್ ಅವರು “ನಕಲಿ ಅಥವಾ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡವರ ಹಾಗೂ ಅದಕ್ಕೆ ಕಾರಣರಾದವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಅದರಂತೆ, ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ನಿರ್ದೇಶಕರು ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕಿತ್ತು. ಆದರೆ ಈವರೆಗೆ ವರದಿ ಸಲ್ಲಿಸಿಲ್ಲ” ಎಂದು ಪೀಠದ ಗಮನಕ್ಕೆ ತಂದರು.
ಸರ್ಕಾರದ ವಕೀಲೆ ನಿಲೋಫರ್ ಅಕ್ಬರ್ ಅವರು “ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ವಕೀಲ ಜಗದೀಶ್ ಅವರನ್ನು ಈಗಷ್ಟೇ ನೇಮಕ ಮಾಡಲಾಗಿದೆ. ನ್ಯಾಯಾಲಯದ ಆದೇಶದಂತೆ ವರದಿ ಸಲ್ಲಿಸಲು ಕಾಲಾವಕಾಶಬೇಕು” ಎಂದು ಕೋರಿದರು.
ಇದನ್ನು ಪರಿಗಣಿಸಿದ ಪೀಠವು ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.
ಸುತ್ತೋಲೆ ಪ್ರಶ್ನಿಸಲು ಸಲಹೆ: ಈ ಮಧ್ಯೆ ಪರಿಶಿಷ್ಟ ಪಂಗಡದ ನಾಯಕ, ನಾಯಕ ಜಾತಿಯ ಸಮಾನಾಂತರ ಪರಿವಾರ ಮತ್ತು ತಳವಾರ ಜಾತಿಗಳಿಗೆ ಜಾತಿ ಪ್ರಮಾಣಪತ್ರ ವಿತರಿಸುವ ಸಂಬಂಧ ರಾಜ್ಯ ಸರ್ಕಾರ ಈ ವರ್ಷದ ಫೆಬ್ರವರಿಯಲ್ಲಿ ಹೊರಡಿಸಿರುವ ಸುತ್ತೋಲೆಯಿಂದ ಸಾಕಷ್ಟು ಗೊಂದಲ ನಿರ್ಮಾಣವಾಗಿದೆ. ಅರ್ಹ ಫಲಾನುಭವಿಗಳಿಗೆ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ. ಇದರಿಂದ ಉದ್ಯೋಗ, ಶಿಕ್ಷಣ ಮತ್ತಿತರ ಉದ್ದೇಶಗಳಿಗೆ ತೊಂದರೆ ಆಗುತ್ತಿದೆ ಎಂದು ಮಧ್ಯಂತರ ಅರ್ಜಿದಾರ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಪರ ವಕೀಲ ಎಚ್ ಸುನೀಲ್ ಕುಮಾರ ನ್ಯಾಯಾಲಯದ ಗಮನಕ್ಕೆ ತಂದರು. ಸುತ್ತೋಲೆಯನ್ನು ಪ್ರತ್ಯೇಕವಾಗಿ ಪ್ರಶ್ನಿಸುವಂತೆ ನ್ಯಾಯಾಲಯ ಸಲಹೆ ನೀಡಿತು.