ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಲು ಎನ್‌ಎಚ್‌ಐಎಗೆ ಹೈಕೋರ್ಟ್‌ ನಿರ್ದೇಶನ

ಎನ್‌ಎಚ್‌-66, ಎನ್‌ಎಚ್‌-275 ಮತ್ತು ಕರಾವಳಿ ಕರ್ನಾಟಕದ ಇತರ ಮುಖ್ಯ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ. ಅವುಗಳನ್ನು ಸುರಕ್ಷಿತ ರಸ್ತೆಗಳನ್ನಾಗಿ ಮಾಡುವಲ್ಲಿ ಎನ್‌ಎಚ್ಎಐ ವಿಫಲವಾಗಿದೆ ಎಂದು ಆಕ್ಷೇಪಿಸಲಾಗಿದೆ.
High Court of Karnataka
High Court of Karnataka
Published on

ಮಂಗಳೂರು-ಉಡುಪಿ ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಸುರಕ್ಷಿತ ಸಂಚಾರದ ರಸ್ತೆಗಳನ್ನಾಗಿ ಮಾಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.

ಮಂಗಳೂರಿನ ವಕೀಲ ಎಸ್‌ ಆಕಾಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕರಾವಳಿ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-66, ರಾಷ್ಟ್ರೀಯ ಹೆದ್ದಾರಿ-275 (ಮಂಗಳೂರು-ಉಡುಪಿ ನಡುವಿನ ಪ್ರದೇಶ) ಮತ್ತು ಇತರ ಮುಖ್ಯ ರಸ್ತೆಗಳನ್ನು ವಾಹನ ಚಲಾಯಿಸಲು ಯೋಗ್ಯವಾದ, ಸುರಕ್ಷಿತವಾದ ಮತ್ತು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲ್ಪಡುವ ರೀತಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನಿರ್ದೇಶಿಸಿದೆ.

ಅರ್ಜಿದಾರರ ಪರ ವಕೀಲ ಆಕಾಶ್‌ ಅವರು “ಅರ್ಜಿಯಲ್ಲಿ ಉಲ್ಲೇಖಿಸಲಾದ ಕರಾವಳಿ ಭಾಗದ ಹೆದ್ದಾರಿಗಳಲ್ಲಿನ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ ಮತ್ತು ಇತ್ತೀಚೆಗೆ ಭಾರೀ ಗುಂಡಿಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ನಿತ್ಯ ಹೈರಣಾಗುತ್ತಿದ್ದಾರೆ” ಎಂದು ಪೀಠಕ್ಕೆ ವಿವರಿಸಿದರು.

ಅರ್ಜಿದಾರರು ಪ್ರಸ್ತಾಪಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಪೀಠವು ಅರ್ಜಿದಾರರ ಮನವಿಗಳನ್ನು ಪರಿಶೀಲಿಸಲು ಮತ್ತು ಅದನ್ನು ಪರಿಗಣಿಸಿ ಸೂಕ್ತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಪ್ರತಿವಾದಿಗಳಿಗೆ ನಿರ್ದೇಶನ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ-66, ರಾಷ್ಟ್ರೀಯ ಹೆದ್ದಾರಿ-275 ಮತ್ತು ಕರಾವಳಿ ಕರ್ನಾಟಕದ ಇತರ ಮುಖ್ಯ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ. ಅವುಗಳನ್ನು ಸುರಕ್ಷಿತ, ವಾಹನ ಚಲಾಯಿಸಲು ಯೋಗ್ಯವಾದ ಮತ್ತು ವೈಜ್ಞಾನಿಕವಾಗಿ ನಿರ್ವಹಿಸಲ್ಪಟ್ಟ ರಸ್ತೆಗಳನ್ನಾಗಿ ಮಾಡುವಲ್ಲಿ ಎನ್‌ಎಚ್ಎಐ ಸೇರಿದಂತೆ ಎಲ್ಲಾ ಪ್ರತಿವಾದಿಗಳು ನಿರಂತರ ನಿಷ್ಕ್ರಿಯತೆ ತೋರುತ್ತಿದ್ದಾರೆ. ಈ ನಿರ್ಲಕ್ಷ್ಯವು ಸಂವಿಧಾನದ 19(1)(d) ಮತ್ತು 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ಪರಿಣಾಮಕಾರಿ ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲು, ಬ್ಲಾಕ್ ಸ್ಪಾಟ್ ಗಳು ಮತ್ತು ಅಪಘಾತ ಬಾಧಿತ ವಲಯಗಳನ್ನು ಗುರುತಿಸಲು ಮತ್ತು ಸರಿಪಡಿಸಲು, ಪಾರದರ್ಶಕ ಮತ್ತು ಸುಲಭವಾಗಿ ದೂರು ನೀಡುವ ವ್ಯವಸ್ಥೆಯ ಮೂಲಕ ಸಾರ್ವಜನಿಕ ಕುಂದುಕೊರತೆ ಪರಿಹಾರವನ್ನು ಖಾತರಿಪಡಿಸಿಕೊಳ್ಳಲು ಅರ್ಜಿಯಲ್ಲಿ ಕೋರಲಾಗಿತ್ತು.

ಅಲ್ಲದೆ, ಟೋಲ್ ಗುತ್ತಿಗೆದಾರರು ಮತ್ತು ಲೋಪಗಳಿಗೆ ಕಾರಣರಾದ ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿ ಮಾಡಲು, ಹಾನಿ ಮತ್ತು ದಂಡಗಳ ವಸೂಲಿ ಸೇರಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯ ಕಾರ್ಯವಿಧಾನವನ್ನು ಜಾರಿಗೆ ತರಲು ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿತ್ತು.

Kannada Bar & Bench
kannada.barandbench.com