ರಾಜ್ಯದ ಎಲ್ಲಾ ಶಾಸಕರು ಹಾಗೂ ಸಂಸದರ ಆಸ್ತಿ ಮತ್ತು ಆದಾಯದ ಮೂಲಗಳ ಬಗ್ಗೆ ಪ್ರತಿ ವರ್ಷ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ವಜಾ ಮಾಡಿದೆ.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು “ಸರ್ಕಾರಿ ನೌಕರರು ಹಾಗೂ ಚುನಾಯಿತ ಜನಪ್ರತಿನಿಧಿಗಳ ಆಸ್ತಿ-ಆದಾಯ ಮೂಲಗಳ ಮೇಲೆ ನಿಗಾ ಇಟ್ಟು, ಅದರಲ್ಲಿ ವ್ಯತ್ಯಾಸಗಳು ಕಂಡು ಬಂದಲ್ಲಿ ಕ್ರಮ ಜರುಗಿಸಲು ಈಗಾಗಲೇ ಕಾನೂನು ಇದೆ. ಆ ಕಾನೂನು ಜಾರಿಗೆ ತರಲು ಶಾಸನ ಸಂಸ್ಥೆಗಳು ಇವೆ. ಸರ್ಕಾರಿ ನೌಕರರ ಅಥವಾ ಜನಪ್ರತಿನಿಧಿಗಳ ಆಸ್ತಿ ಗಳಿಕೆ ಅಕ್ರಮ ಎಂದು ಗೊತ್ತಾದರೆ, ಘೋಷಿತ ಮೂಲಗಳಿಂಗಿತ ಹೆಚ್ಚಿನ ಆದಾಯ ಕಂಡು ಬಂದರೆ, ಆದಾಯದ ಮೂಲಗಳ ಬಗ್ಗೆ ಅನುಮಾನಗಳು ಮೂಡಿದಾಗ ಕಾಲ-ಕಾಲಕ್ಕೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಈಗಾಗಲೇ ಇದೆ. ಹೀಗಾಗಿ, ಇದೊಂದು ಅಸ್ಪಷ್ಟ ಅರ್ಜಿಯಾಗಿದೆ. ಅರ್ಜಿಯಯಲ್ಲಿನ ಮನವಿ ತೀರಾ ಸಾಮಾನ್ಯ ಸ್ವರೂಪದ್ದಾಗಿದೆ” ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಮುಖ್ಯಮಂತ್ರಿಗಳ ಸಹಿತ ಎಲ್ಲಾ ಸಚಿವರು, ಶಾಸಕರುಗಳ ಆಸ್ತಿ ಹಾಗೂ ಆದಾಯದ ಮೂಲಗಳ ಬಗ್ಗೆ ಪ್ರತಿ ವರ್ಷ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ತಾವು 2023ರ ಡಿಸೆಂಬರ್ 20ರಂದು ಸಲ್ಲಿಸಿರುವ ಮನವಿ ಆಧರಿಸಿ ವಿಧಾನಸಭೆ ಹಾಗೂ ಲೋಕಸಭೆಗೆ ರಾಜ್ಯದಿಂದ ಆಯ್ಕೆಯಾಗುವ ವಿಧಾನಸಭೆ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಸಂಸದರ ಆಸ್ತಿ ಹಾಗೂ ಆದಾಯದ ಮೂಲಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಗುರುನಾಥ ವಡ್ಡೆ ಮನವಿ ಮಾಡಿದ್ದರು.