ಮಂತ್ರಿ ಡೆವಲಪರ್ಸ್‌ನ ಸುಶೀಲ್‌, ಪತ್ನಿ, ಪುತ್ರನ ವಿರುದ್ಧದ ನಂಬಿಕೆ ದ್ರೋಹ, ಇ ಡಿ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

“ಒಪ್ಪಂದ ಉಲ್ಲಂಘನೆಯಾಗಿದೆ ಎಂದು ದೂರುದಾರರು ತಮ್ಮ ಅಹವಾಲನ್ನು ಬೇರೆ ಯಾವುದೇ ವೇದಿಕೆ ಕೊಂಡೊಯ್ಯಬಹುದು. ಇದಕ್ಕೆ ಹಾಲಿ ಆದೇಶದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Sushil Panduranga Mantri  and Karnataka HC
Sushil Panduranga Mantri and Karnataka HC

ಮಂತ್ರಿ ಡೆವಲಪರ್ಸ್‌ ಪ್ರವರ್ತಕರ ವಿರುದ್ಧದ ವಂಚನೆ ಪ್ರಕರಣ ಹಾಗೂ ಅದರ ನಂತರದ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಮಂತ್ರಿ ಡೆವಲಪರ್ಸ್‌ ನಿರ್ದೇಶಕರಾದ ಸುಶೀಲ್‌, ಪ್ರತೀಕ್‌ ಮತ್ತು ಸ್ನೇಹಲ್‌ ಮಂತ್ರಿ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಫ್ಲ್ಯಾಟ್‌ಗಳನ್ನು ನಿರ್ಮಿಸಿ ಹಸ್ತಾಂತರಿಸುವುದು ತಡವಾದರೆ ಅದು ಒಪ್ಪಂದದ ಉಲ್ಲಂಘನೆಯಾಗುತ್ತದೆಯೇ ವಿನಾ ಅದನ್ನು ವಂಚನೆ ಅಥವಾ ನಂಬಿಕೆ ದ್ರೋಹ ಎನ್ನಲಾಗದು” ಎಂದು ನ್ಯಾಯಾಲಯವು ಹೇಳಿದೆ.

“ಒಪ್ಪಂದದ ಉಲ್ಲಂಘನೆಯು ಅಪ್ರಾಮಾಣಿಕ ಭಾವನೆ ಹೊಂದಿರದಿದ್ದರೆ ಅದು ಐಪಿಸಿ ಸೆಕ್ಷನ್‌ 406 ಅಥವಾ 420ರ ಅಡಿ ಅಪರಾಧವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಫ್ಲ್ಯಾಟ್‌ ಅನ್ನು ನಿಗದಿತ ಅವಧಿಯಲ್ಲಿ ನೀಡಿಲ್ಲ ಎಂದ ಮಾತ್ರಕ್ಕೆ ಕ್ರಿಮಿನಲ್‌ ಕಾನೂನಿಗೆ ಚಾಲನೆ ನೀಡಲಾಗದು. ಇದು ಒಪ್ಪಂದ ಉಲ್ಲಂಘನೆಯಾಗುತ್ತದೆ. ಅದು ಒಪ್ಪಂದದ ಉಲ್ಲಂಘನೆಯಾದರೆ ವಂಚನೆ ಅಥವಾ ಕ್ರಿಮಿನಲ್‌ ನಂಬಿಕೆ ದ್ರೋಹವಾಗದು” ಎಂದು ನ್ಯಾಯಾಲಯ ಹೇಳಿದೆ.

“ಒಪ್ಪಂದ ಉಲ್ಲಂಘನೆಯಾಗಿದೆ ಎಂದು ದೂರುದಾರರು ತಮ್ಮ ಅಹವಾಲನ್ನು ಬೇರೆ ಯಾವುದೇ ವೇದಿಕೆಗೆ ಕೊಂಡೊಯ್ಯಬಹುದು. ಇದಕ್ಕೆ ಹಾಲಿ ಆದೇಶದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅರ್ಜಿದಾರರ ಪರವಾಗಿ ವಕೀಲ ಎಸ್‌ ಮಹೇಶ್‌ ವಕಾಲತ್ತು ಹಾಕಿದ್ದು, ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ನಿರ್ಮಾಣ ಉದ್ಯಮದಲ್ಲಿ ಫ್ಲ್ಯಾಟ್‌ಗಳನ್ನು ಅಡಮಾನ ಮಾಡುವುದಕ್ಕೆ ಅವಕಾಶವಿದೆ. ಮನೆ ಖರೀದಿದಾರರು ತಮಗೆ ಲಭ್ಯ ಇರುವ ಎಲ್ಲಾ ವೇದಿಕೆಗಳು ಹೋಗಿದ್ದಾರೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಧನಂಜಯ ಎಂಬವರು ನೀಡಿದ್ದ ದೂರನ್ನು ಆಧರಿಸಿ ಸುಬ್ರಹ್ಮಣ್ಯಪುರಂ ಪೊಲೀಸರು ಸುಶೀಲ್‌, ಅವರ ಪತ್ನಿ ಸ್ನೇಹಲ್‌ ಮತ್ತು ಪುತ್ರ ಪ್ರತೀಕ್‌ ಮಂತ್ರಿ ವಿರುದ್ಧ 2020ರಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

ಮಂತ್ರಿ ಡೆವಲಪರ್ಸ್‌ನ ಭಾಗವಾದ ಮಂತ್ರಿ ಕ್ಯಾಸಲ್ಸ್‌ ಪ್ರೈ. ಲಿ ನಿರ್ಮಿಸುತ್ತಿದ್ದ ʼಮಂತ್ರಿ ಸೆರೆನಿಟಿʼ ಅಪಾರ್ಟ್‌ಮೆಂಟ್‌ನಲ್ಲಿ ಧನಂಜಯ ಅವರು ಫ್ಲ್ಯಾಟ್‌ ಕಾಯ್ದಿರಿಸಿದ್ದರು.

60-70 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಪಾವತಿಸಿದರೂ ನಿಗದಿತ ವೇಳೆಗೆ ಫ್ಲ್ಯಾಟ್‌ಗಳನ್ನು ತಮ್ಮ ಸುಪರ್ದಿಗೆ ನೀಡಿಲ್ಲ. ಬದಲಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡು ಹವಾಲಾ ಚಟುವಟಿಕೆಗೆ ಬಳಸಲಾಗಿದೆ. ಮನೆ ಖರೀದಿದಾರರಿಂದ ಪಡೆದ ಹಣವನ್ನು ಬೇರೆ ಚಟುವಟಿಕೆಗಳಿಗೆ ವಿನಿಯೋಗಿಸಲಾಗಿದೆ. ಅಲ್ಲದೇ, ಹಂಚಿಕೆ ಮಾಡಲಾದ ಫ್ಲ್ಯಾಟ್‌ಗಳನ್ನು ಅಡಮಾನ‌ ಮಾಡಲಾಗಿದೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯಿದೆಯ ಅಡಿ ಜಾರಿ ನಿರ್ದೇಶನಾಲಯವು ಪ್ರಕ್ರಿಯೆ ಆರಂಭಿಸಿತ್ತು.

Attachment
PDF
Sushil Mantri and others Vs State of Karnataka & others.pdf
Preview

Related Stories

No stories found.
Kannada Bar & Bench
kannada.barandbench.com