
ಪರೀಕ್ಷೆ ಬರೆಯುವಾಗ ನಕಲು ಮಾಡಿದ ಆರೋಪದ ಮೇಲೆ ವಿದ್ಯಾರ್ಥಿನಿಯೊಬ್ಬರನ್ನು ಮುಂದಿನ ಪರೀಕ್ಷೆ ಬರೆಯುವುದಕ್ಕೆ ನಿರ್ಬಂಧಿಸಿ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ತೀರ್ಮಾನ ಪ್ರಶ್ನಿಸಿದ್ದ ಅರ್ಜಿಯನ್ನು ವಿಭಾಗೀಯ ಪೀಠವು ಬುಧವಾರ ವಜಾ ಮಾಡಿದೆ.
ವಿದ್ಯಾರ್ಥಿನಿ ಬಿ ಆರತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ವಜಾ ಮಾಡಿತು.
“ಹಾಲ್ ಟಿಕೆಟ್ ಮೇಲೆ ಉತ್ತರ ಬರೆದುಕೊಂಡು ಅದನ್ನು ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಬಳಕೆ ಮಾಡಿರುವುದನ್ನು ಆರತಿ ಒಪ್ಪಿಕೊಂಡಿದ್ದಾರೆ. ಅಭ್ಯರ್ಥಿ ಒಪ್ಪಿಕೊಂಡಿರುವುದರಿಂದ ಉಳಿದ ಎಲ್ಲಾ ವಾದಗಳು ಅಪ್ರಸ್ತುತವಾಗುತ್ತವೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
“ಪರೀಕ್ಷೆಯಲ್ಲಿ ನಕಲು ಮಾಡಿದ ಪ್ರಕರಣಗಳನ್ನು ಪರಿಗಣಿಸುವಾಗ ನ್ಯಾಯಾಲಯವು ತಾಂತ್ರಿಕ ಅಂಶಗಳನ್ನು ಹೆಚ್ಚಿಗೆ ಅವಲಂಬಿಸಲಾಗದು ಎಂಬುದು ನಿಜವಾದರೂ ಹಾಲಿ ಪ್ರಕರಣದಲ್ಲಿ ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯು ಅತ್ಯಂತ ಸೀಮಿತವಾಗಿದೆ. ಈ ನೆಲೆಯಲ್ಲಿ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲಾಗದು. ಮೇಲ್ಮನವಿಯಲ್ಲಿ ಮೆರಿಟ್ ಇಲ್ಲವಾಗಿದ್ದು, ಅದನ್ನು ವಜಾ ಮಾಡಲಾಗಿದೆ” ಎಂದು ಆದೇಶಿಸಿತು.
ಮೇಲ್ಮನವಿದಾರೆ ಪರ ವಕೀಲರು “ಎಂಪಿಸಿಸಿ ವಾಸ್ತವಿಕ ಅಂಶಗಳನ್ನು ಪತ್ತೆ ಹಚ್ಚಿ ಶಿಫಾರಸ್ಸು ಮಾಡುವ ಸಮಿತಿಯಾಗಿದ್ದು, ಶಿಕ್ಷೆ ವಿಧಿಸಲಾಗದು. ವಿದ್ಯಾರ್ಥಿನಿಯನ್ನು ಆರೋಪಿತ ನಕಲು ಒಪ್ಪಿಕೊಳ್ಳುವಂತೆ ಬಲವಂತಪಡಿಸಲಾಗಿದೆ. ಹೀಗಾಗಿ, ಇಲ್ಲಿ ಕಾರ್ಯವಿಧಾನದಲ್ಲಿ ಲೋಪವಾಗಿದೆ. ವಿದ್ಯಾರ್ಥಿನಿಯು ಅತ್ಯಂತ ಹಿಂದುಳಿದ ವರ್ಗದಿಂದ ಬಂದಿದ್ದು, ಆಕೆಯ ತಂದೆ ಕೂಲಿ ಕೆಲಸ ಮಾಡುತ್ತಾರೆ. ಆಕೆ ಇಡೀ ಕುಟುಂಬದಲ್ಲಿ ಮೊದಲ ತಲೆಮಾರಿನ ಕಾನೂನು ವಿದ್ಯಾರ್ಥಿಯಾಗಿದ್ದು, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು” ಎಂದು ಮನವಿ ಮಾಡಿದರು.
ವಿದ್ಯಾರ್ಥಿನಿ ಆರತಿ ಅವರು ಮಾನವ ಹಕ್ಕುಗಳ ಕಾನೂನು ಮತ್ತು ಪ್ರಾಕ್ಟೀಸ್ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿಶ್ವವಿದ್ಯಾಲಯವು ದುಷ್ಕೃತ್ಯ ಪರಿಗಣನೆ ಸಮಿತಿ (ಎಂಪಿಸಿಸಿ) ರಚಿಸಿದ್ದು, ಅದರ ಮುಂದೆ ಹಾಜರಾಗಲು ವಿದ್ಯಾರ್ಥಿನಿಗೆ ಸೂಚಿಸಲಾಗಿತ್ತು. ಅಲ್ಲಿ ಆಕೆಯನ್ನು ಮುಂದೆ ಬಾಕಿ ಇದ್ದ ಎರಡು ವಿಷಯಗಳ ಪರೀಕ್ಷೆಗಳಲ್ಲಿ ಭಾಗಿಯಾದಂತೆ ನಿರ್ಬಂಧಿಸಿ, ಮಾನವ ಹಕ್ಕುಗಳ ವಿಷಯದ ಪರೀಕ್ಷೆಯಲ್ಲಿನ ಅಂಕಗಳನ್ನು ಪರಿಗಣಿಸಿರಲಿಲ್ಲ.