
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) 'ನಮ್ಮ ಮೆಟ್ರೊ' ಪ್ರಯಾಣ ದರವನ್ನು ನಿಯಮಬಾಹಿರವಾಗಿ ಶೇ.71ರವರೆಗೂ ಏರಿಕೆ ಮಾಡಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಬೆಂಗಳೂರಿನ ಸನತ್ ಕುಮಾರ್ ಶೆಟ್ಟಿ, ಚೈತನ್ಯ ಸುಬ್ರಹ್ಮಣ್ಯ ಮತ್ತು ಚೇತನ್ ಗಾಣಿಗೇರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ವಿಭಾಗೀಯ ಪೀಠ ನಡೆಸಿತು.
“ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ 2002ರ ಸೆಕ್ಷನ್ 33ರ ಅಡಿಯಲ್ಲಿ ಶುಲ್ಕ ನಿಗದಿಗೆ ಅವಕಾಶವಿದ್ದು, ಇದೇ ಕಾಯಿದೆಯಡಿಯಲ್ಲಿ ಪ್ರಸ್ತುತ ದರ ಏರಿಕೆ ಮಾಡಲಾಗಿದೆ. ಮೆಟ್ರೊ ಆಡಳಿತವು ಕಾಲಕಾಲಕ್ಕೆ ದರವನ್ನು ನಿಗದಿಪಡಿಸಲು ಅಧಿಕಾರ ಹೊಂದಿದ್ದು, ದರ ನಿಗದಿ ಸಮಿತಿ ರಚನೆ ಮಾಡಿದ್ದು, ಅದರ ಶಿಫಾರಸ್ಸು ಆಧಾರದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆ ಸಂಬಂಧ ರಚನೆಯಾಗಿದ್ದ ತಜ್ಞರ ಸಮಿತಿ ಎಲ್ಲ ಆಯಾಮಗಳಲ್ಲಿ ಅಧ್ಯಯನ ಮಾಡಿ ಬೆಲೆ ಏರಿಕೆಗೆ ಶಿಫಾರಸ್ಸು ಮಾಡಿದೆ. ಇಂಥ ತಜ್ಞರು ಪರಿಶೀಲಿಸಿ ಆದೇಶಿಸಿರುವ ಅಂಶಗಳನ್ನು ನ್ಯಾಯಾಲಯ ಮರು ಪರಿಶೀಲನೆ ನಡೆಸಲು ಅವಕಾಶವಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
“ಬೆಲೆ ಏರಿಕೆ ಸಂಬಂಧ ದರ ನಿಗದಿ ಸಮಿತಿ ವರದಿ ಪರಿಗಣಿಸುವುದು ಉತ್ತಮ ನಿರ್ಧಾರ. ಶಾಸನಬದ್ಧ ಉಲ್ಲಂಘನೆಯನ್ನು ಹೊರತುಪಡಿಸಿ ಇತರೆ ನಿರ್ಧಾರದ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಕ್ಕೆ ಅವಕಾಶವಿಲ್ಲ” ಎಂದು ಪೀಠ ತಿಳಿಸಿದೆ.
“ಮೆಟ್ರೊ ಬೆಲೆ ಏರಿಕೆ ಕ್ರಮವು ಕಾನೂನು ಉಲ್ಲಂಘನೆಯಾಗಿದೆ ಎಂಬ ಯಾವುದೇ ಅಂಶಗಳು ಕಾಣುತ್ತಿಲ್ಲ. ಅರ್ಜಿದಾರರು ಮನವಿ ಮಾಡಿದ ಪರಿಣಾಮ ಭರವಸೆಯ ಉಲ್ಲಂಘನೆಯಾಗಿದೆ ಹಾಗೂ ಬಿಎಂಆಎರ್‌ಸಿಎಲ್ ಕ್ರಮ ಖಂಡನೀಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ತಪ್ಪಾಗಿ ಅರ್ಥೈಸಿಕೊಂಡು ಪಿಐಎಲ್ ಸಲ್ಲಿಕೆ ಮಾಡಲಾಗಿದೆ” ಎಂದು ಅರ್ಜಿ ವಜಾಗೊಳಿಸಿತು.
ಅರ್ಜಿದಾರ ಪರ ವಕೀಲರು “ಪ್ರಸ್ತುತ ಜಾರಿಯಲ್ಲಿರುವ ಪ್ರಯಾಣ ದರವನ್ನು ಶೇ.25ಕ್ಕಿಂತ ಹೆಚ್ಚಾಗಿ ಏರಿಕೆ ಮಾಡದಂತೆ ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಲಾಗಿತ್ತು. ಬಿಎಂಆರ್‌ಸಿಎಲ್ ಶೇ. 15 ರಿಂದ 20 ರಷ್ಟು ದರ ಏರಿಕೆ ಪರಿಗಣಿಸಬೇಕಾಗಿತ್ತು. ಆದರೆ ಶೇ. 71 ರಷ್ಟು ಹೆಚ್ಷಳ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದು ಕಾನೂನುಬಾಹಿರ” ಎಂದು ವಾದಿಸಿದರು.