ರಾಜ್ಯ ಸರ್ಕಾರದ ಎಲ್ಲಾ ಇಲಾಖೆ ಮತ್ತು ಪ್ರಾಧಿಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂಬಂಧಿಸಿದಂತೆ ನಡೆಸುವ ತನ್ನ ಅಧಿಕೃತ ವ್ಯವಹಾರಗಳಲ್ಲಿ ದಲಿತ ಪದ ಬಳಕೆ ಮಾಡಲು ತಪ್ಪಿಸಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ಮಹೇಂದ್ರ ಕುಮಾರ ಮಿತ್ರಾ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುವ ಪ್ರಮಾಣ ಪತ್ರದಲ್ಲಿ ಹರಿಜನ ಮತ್ತು ಗಿರಿಜನ ಎನ್ನುವ ಪದವನ್ನು ಬಳಕೆ ಮಾಡದಂತೆ ಸೂಚಿಸಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ 2020ರ ಮೇ 20ರಂದು ಸುತ್ತೋಲೆ ಹೊರಡಿಸಿದ್ದಾರೆ. ಅದನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಅಲ್ಲದೆ, ದಲಿತ ಪದವನ್ನು ಬಳಕೆ ಮಾಡುವುದು ಅಸಾಂವಿಧಾನಿಕ. ಆದ್ದರಿಂದ, ಸರ್ಕಾರದ ಎಲ್ಲಾ ಇಲಾಖೆ ಮತ್ತು ಪ್ರಾಧಿಕಾರಗಳು ತನ್ನ ಅಧಿಕೃತ ವ್ಯವಹಾರಗಳಲ್ಲಿ ದಲಿತ ಎಂಬ ಪದವನ್ನು ಬಳಕೆ ಮಾಡದಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಅರ್ಜಿದಾರರು ತಮ್ಮ ವಾದವನ್ನು ಪುಷ್ಠೀಕರಿಸುವಂತಹ ಆಧಾರಗಳನ್ನು ನ್ಯಾಯಾಲಯದ ಮುಂದೆ ಇರಿಸಿಲ್ಲ. ಕೇವಲ ಅರ್ಜಿದಾರರ ಹೇಳಿಕೆಯಿಂದ ಸರ್ಕಾರದ ಸುತ್ತೋಲೆಯು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ತೀರ್ಮಾನಿಸಲಾಗದು ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿದೆ.