ದಿನಗೂಲಿ ನೌಕರರಿಗೆ ಮೂರು ತಿಂಗಳಲ್ಲಿ ಪಿಂಚಣಿ ಪಾವತಿಸಲು ಸರ್ಕಾರಕ್ಕೆ ಹೈಕೋರ್ಟ್‌ ಗಡುವು

ಚಿಕ್ಕಮಗಳೂರು ಜಿಲ್ಲೆಯ ಕಾಳಪ್ಪ ಸೇರಿದಂತೆ 14 ನೌಕರರಿಗೆ ಪಿಂಚಣಿ ನೀಡಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ ಹೊರಡಿಸಿದ್ದ ಆದೇಶ ರದ್ದು ಕೋರಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆಯುಕ್ತರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌.
ದಿನಗೂಲಿ ನೌಕರರಿಗೆ ಮೂರು ತಿಂಗಳಲ್ಲಿ ಪಿಂಚಣಿ ಪಾವತಿಸಲು ಸರ್ಕಾರಕ್ಕೆ ಹೈಕೋರ್ಟ್‌ ಗಡುವು
Published on

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ 14 ನೌಕರರಿಗೆ ಪಿಂಚಣಿ ನೀಡದ ಸರ್ಕಾರದ ವಿರುದ್ಧ ಈಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ನೌಕರರಿಗೆ ಮೂರು ತಿಂಗಳಲ್ಲಿ ಪಿಂಚಣಿ ನೀಡುವಂತೆ ತಾಕೀತು ಮಾಡಿದೆ.

ಚಿಕ್ಕಮಗಳೂರು ಜಿಲ್ಲೆಯ ಕಾಳಪ್ಪ ಸೇರಿದಂತೆ 14 ನೌಕರರಿಗೆ ಪಿಂಚಣಿ ನೀಡಲು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆಯುಕ್ತರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ರಾಮಚಂದ್ರ ಹುದ್ದಾರ್ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

“ಪಿಂಚಣಿ ಸೌಲಭ್ಯ ಪಡೆದಿರುವ ಸರ್ಕಾರದ ಇತರೆ ನೌಕರರಂತೆಯೇ ಕಾಳಪ್ಪ ಮತ್ತಿತರ 13 ನೌಕರರು 30 ವರ್ಷ ಸೇವೆ ಸಲ್ಲಿಸಿದ್ದಾರೆ. ಇತರೆ ಉದ್ಯೋಗಿಗಳಿಗೆ ಕಲ್ಪಿಸಿರುವ ಪಿಂಚಣಿ ಸೌಲಭ್ಯವನ್ನು ಕಾಳಪ್ಪ ಮತ್ತಿತರರಿಗೆ ನಿರಾಕರಿಸುವುದು ತಾರತಮ್ಯ. ಸಂವಿಧಾನದ 14 (ಸಮಾನತೆ) ಮತ್ತು 16ನೇ ವಿಧಿ (ಸಾರ್ವಜನಿಕ ಉದ್ಯೋಗದಲ್ಲಿ ಸಮಾವನ ಅವಕಾಶ) ಅನ್ವಯ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿ ಅಥವಾ ಸಮೂಹಕ್ಕೆ ತಾರತಮ್ಯ ಮಾಡುವಂತಿಲ್ಲ. ಸಾರ್ವಜನಿಕ ಉದ್ಯೋಗದಲ್ಲಿ ಸಮಾನತೆ ಹಾಗೂ ಸಮಾನ ಅವಕಾಶ ಕಾಯ್ದುಕೊಳ್ಳಬೇಕಾಗುತ್ತದೆ. ಸರ್ಕಾರದ ಇತರೆ ನೌಕರರಂತೆ ಕಾಳಪ್ಪ ಮತ್ತಿತರರನ್ನು ಪರಿಗಣಿಸಬೇಕಿದೆ. ಅವರಿಗೆ ಮೂರು ತಿಂಗಳಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಹಾಗೂ ಹಿಂಬಾಕಿ ಪಾವತಿಸಬೇಕು. ಕಾಳಪ್ಪ ಅವರ ಮಾದರಿಯಲ್ಲಿ ನಿಯೋಜಿಸಲಾದ ಇತರೆ ನೌಕರರಿಗೂ ಪಿಂಚಣಿ ಸೌಲಭ್ಯ ಕೈತಪ್ಪದಂತೆ ನೋಡಿಕೊಳ್ಳಬೇಕು” ಎಂದು ನಿರ್ದೇಶಿಸಿದೆ. ಆದೇಶದ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಆಯುಕ್ತರ ಪರ ಸರ್ಕಾರಿ ವಕೀಲರು ವಾದಿಸಿ, 1996ರ ಮೇ 12ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದನ್ವಯ ಕಾಳಪ್ಪ ಮತ್ತಿತರಿಗೆ ಉದ್ಯೋಗ ನೀಡಲಾಗಿದೆ. ಅವರ ಉದ್ಯೋಗವು ಕೇವಲ ಸರ್ಕಾರ ಆದೇಶದಿಂದ ನಿಯಂತ್ರಲ್ಪಟ್ಟಿರುತ್ತದೆ ಹೊರತು ನೇಮಕಾತಿ ನಿಯಮಗಳಿಂದಲ್ಲ. ಈ ನೌಕರರು ಪಿಂಚಣಿಯೇತರ ಉದ್ಯೋಗದ ವಿಭಾಗ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ, ಅವರು ಪಿಂಚಣಿ ಸೌಲಭ್ಯ ಹಕ್ಕುಸಾಧನೆ ಮಾಡಲಾಗದು. ನೌಕರರು ಗ್ರಾಚುಟಿ ಸೌಲಭ್ಯ ಪಡೆಯಲಷ್ಟೇ ಅರ್ಹರು ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರಿನ ಕಾಳಪ್ಪ (80), ಸಬ್ಜನ್‌ (73) ಮತ್ತು ಅಂಜಪ್ಪ (75) ಸೇರಿದಂತೆ 14 ನೌಕರರು 1963ರಿಂದ 69ರ ಅವಧಿಯಲ್ಲಿ ಚಿಕ್ಕಮಗಳೂರು ಅಜ್ಜಂಪುರ ಗ್ರಾಮದ ಅಮೃತ್‌ ಮಹಲ್‌ ಜಾನುವಾರು ತಳಿ ಅಭಿವೃದ್ಧಿ ಕೇಂದ್ರಕ್ಕೆ ದಿನಗೂಲಿ ನೌಕರರಾಗಿ ನೇಮಕಗೊಂಡಿದ್ದರು. ಕೆಲ ಕಾಲದ ನಂತರ ಅವರನ್ನು ತಿಂಗಳ ವೇತನ ಕಾರ್ಮಿಕರಾಗಿ ಬದಲಾವಣೆ ಮಾಡಲಾಗಿತ್ತು. ಅವರೆಲ್ಲೂ ಮೂರು ದಶಕಕ್ಕಿಂತ ಹೆಚ್ಚು ಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು. ನಿವೃತ್ತಿ ನಂತರ ಸರ್ಕಾರದ ಇತರೆ ನೌಕರರಿಗೆ ನೀಡುವಂತೆ ತಮಗೂ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆ ಮನವಿಯನ್ನು ಸರ್ಕಾರ ತಿರಸ್ಕರಿಸಿದ್ದರಿಂದ 2017ರಲ್ಲಿ ನೌಕರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳನ್ನು ಪುರಸ್ಕರಿಸಿದ್ದ ಕೆಎಟಿ, ಸರ್ಕಾರದ ಇತರೆ ನೌಕರರಿಗೆ ನೀಡುವಂತೆ ಅರ್ಜಿದಾರ ನೌಕರರಿಗೂ ಪಿಂಚಣಿ ನೀಡುವಂತೆ 2019ರಲ್ಲಿ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ರದ್ದು ಕೋರಿ ರಾಜ್ಯ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆಯುಕ್ತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Attachment
PDF
P Junjappa Vs CCF
Preview
Kannada Bar & Bench
kannada.barandbench.com