
ಸಂಪಂಗಿ ರಾಮನಗರದ ಬನ್ನಪ್ಪ ಪಾರ್ಕ್ ಆಟದ ಮೈದಾನದಲ್ಲಿ ದುರ್ಗಾ ಪೂಜೆ ಆಚರಣೆಗೆ ಪೂರ್ವಭಾವಿ ಸಿದ್ಧತೆಗಾಗಿ ಐದು ದಿನಗಳ ಕಾಲಾವಕಾಶ ಕೋರಿರುವ ಅರ್ಜಿದಾರರ ಮನವಿಯನ್ನು ಪುರಸ್ಕರಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ನವರಾತ್ರಿ ಉತ್ಸವದ ಪೂಜೆಗೆ ಪೂರ್ವಭಾವಿ ಸಿದ್ಧತೆಯಾಗೆ ಇದೇ 6ರಿಂದ 8ರವರೆಗೆ ಪೆಂಡಾಲ್, ಶಾಮಿಯಾನ ಹಾಕಲು ಬಿಬಿಎಂಪಿಗೆ ನಿರ್ದೇಶಿಬೇಕು ಎಂದು ಕೋರಿ ನವಜಾಗರಣ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಆರ್ ಕೃಷ್ಣಕುಮಾರ್ ಮತ್ತು ಎಂ ಜಿ ಉಮಾ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಹೈಕೋರ್ಟ್ ವಕೀಲ ಬ್ರಿಜೇಶ್ ಪಾಟೀಲ್ ಅವರು “ಅರ್ಜಿದಾರರು ಅಕ್ಟೋಬರ್ 9ರಿಂದ 13ರವರೆಗೆ ಸಾರ್ವಜನಿಕ ನವರಾತ್ರಿ ಉತ್ಸವ ಆಚರಿಸಲಿದ್ದಾರೆ. ಇದರ ಸಿದ್ಧತೆಗಾಗಿ 6ರಿಂದ 8ರವರೆಗೆ ಪೆಂಡಾಲ್, ಮಳೆ ರಕ್ಷಣಾ ಶಾಮಿಯಾನ ಹಾಕಲು ಅವಕಾಶ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಬೇಕು” ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ಪೀಠವು ಅರ್ಜಿದಾರರ ಮನವಿಯನ್ನು ಪುರಸ್ಕರಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.