ಪ್ರಿಯತಮನಿಂದ ಪತಿಯ ಕೊಲೆ ಮಾಡಿಸಿದ್ದ ಆರೋಪ: ಪತ್ನಿಗೆ ಸಿಆರ್‌ಪಿಸಿ ಸೆಕ್ಷನ್‌ 437(1) ಅಡಿ ಹೈಕೋರ್ಟ್‌ ಜಾಮೀನು

ಗಲ್ಲು ಹಾಗೂ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವ ಆರೋಪಿ ಮಹಿಳೆಯಾಗಿದ್ದರೆ, ಆಕೆಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಸಿಆರ್‌ಪಿಸಿ ಸೆಕ್ಷನ್ 437(1)‌ ಅಲ್ಲಿ ಅವಕಾಶವಿದೆ ಎಂದು ಹೇಳಲಾಗಿದೆ.
Justice S Vishwajith Shetty and Karnataka High Court
Justice S Vishwajith Shetty and Karnataka High Court

ಪ್ರಿಯತಮನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಲು ಅಡಚಣೆಯಾಗಿರುವ ಕಾರಣಕ್ಕೆ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಹಿಳೆಯೊಬ್ಬರಿಗೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 437(1) ಪರಿಗಣಿಸಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ನೀಡಿದೆ.

ಗಲ್ಲು ಹಾಗೂ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವ ಆರೋಪಿ ಮಹಿಳೆಯಾಗಿದ್ದರೆ, ಆಕೆಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಸಿಆರ್‌ಪಿಸಿ ಸೆಕ್ಷನ್ 437(1)‌ ಅಲ್ಲಿ ಅವಕಾಶವಿದೆ. ಈ ನಿಯಮವನ್ನು ಪರಿಗಣಿಸಿರುವ ನ್ಯಾಯಮೂರ್ತಿ ಎಸ್ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಪತಿಯ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಕುಣಿಗಲ್‌ ನಿವಾಸಿ ಹರ್ಷಿತಾಗೆ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರೆ ಒಂದು ಲಕ್ಷ ರೂಪಾಯಿ. ಮೊತ್ತದ ವೈಯಕ್ತಿಕ ಬಾಂಡ್‌, ಅಷ್ಟೆ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ನಿಯಮಿತವಾಗಿ ಹಾಜರಾಗಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಸಾಕ್ಷ್ಯಧಾರಗಳನ್ನು ತಿರುಚಲು ಯತ್ನಿಸಬಾರದು. ಇದೇ ಮಾದರಿಯ ಅಪರಾಧಗಳಲ್ಲಿ ಭಾಗಿಯಾಗಬಾರದು ಎಂದು ಪೀಠವು ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರೆ ಮಂಜುನಾಥ್‌ ಎಂಬಾತನನ್ನು ಮದುವೆಯಾಗಿದ್ದರು. ಅರ್ಜಿದಾರೆ ಮದುವೆಗೆ ಮುನ್ನವೇ ಮತ್ತೊಬ್ಬರೊಂದಿಗೆ (ಪ್ರಕರಣದ ಮೊದಲ ಆರೋಪಿ) ಸಂಬಂಧ ಹೊಂದಿದ್ದು, ಅದು ಮುದುವೆ ನಂತರವೂ ಮುಂದುವರೆದಿತ್ತು. ಆದರೆ, ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಕಾರಣಕ್ಕೆ ಪತಿ ಮಂಜುನಾಥ್‌ ಕೊಲೆಗೆ ಪ್ರಿಯತಮನಾದ ಮೊದಲ ಆರೋಪಿಯೊಂದಿಗೆ ಅರ್ಜಿದಾರೆ ಪಿತೂರಿ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಅದರಂತೆ ಮೊದಲನೆ ಆರೋಪಿ ಮಂಜುನಾಥ್‌ ಕೊಲೆಗೆ ಇತರೆ ಐವರು ಆರೋಪಿಗಳಿಗೆ ಸುಪಾರಿ ನೀಡಿ, 50 ಸಾವಿರ ರೂಪಾಯಿ ಪಾವತಿಸಿದ್ದರು. 2023ರ ಫೆಬ್ರವರಿ 3ರಂದು ಐವರು ಆರೋಪಿಗಳು ಅರ್ಜಿದಾರೆ ಮನೆಗೆ ಬಂದಿದ್ದರು. ಆಕೆ ಬಾಗಿಲು ತೆರೆದು, ಪತಿ ಮಲಗಿರುವ ಕೊಣೆ ತೋರಿಸಿದ್ದರು.  ಐವರು ಆರೋಪಿಗಳು ರಾಡ್‌ನಿಂದ ಮಂಜುನಾಥ್‌ ತಲೆಗೆ ಹೊಡೆದು ಸಾಯಿಸಿದ್ದರು. ನಂತರ ಮೃತದೇಹವನ್ನು ಸಾಗಿಸಿ ಕೆರೆಯ ಪಕ್ಕದಲ್ಲಿ ಬಿಸಾಡಿದ್ದರು ಎಂಬ ಆರೋಪವಿದೆ. 

ಈ ಕುರಿತು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿದ್ದ ಕುಣಿಗಲ್‌ ಠಾಣಾ ಪೊಲೀಸರು ಅರ್ಜಿದಾರೆ, ಆತನ ಪ್ರಿಯತಮ ಮತ್ತು ಇತರೆ ಐವರು ಆರೋಪಿಗಳನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಅರ್ಜಿದಾರೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರೆ ಪರ ವಕೀಲ ಡಿ ಮೋಹನ್‌ ಕುಮಾರ್‌ ಅವರು ಅರ್ಜಿದಾರೆ ಪತಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆಕೆ ಅಮಾಯಕಳಾಗಿದ್ದಾರೆ. ಅರ್ಜಿದಾರೆಗೆ 20 ವರ್ಷವಾಗಿದ್ದು, 2023ರ ಡಿಸೆಂಬರ್‌ 12ರಿಂದ ಜೈಲಿನಲ್ಲಿದ್ದಾರೆ. ಸಿಆರ್‌ಪಿಸಿ ಸೆಕ್ಷನ್‌ 438(1) ಪ್ರಕಾರ ಗಲ್ಲು ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯ ಎಸಗಿರುವ ಆರೋಪದಲ್ಲಿ ಜೈಲು ಸೇರಿರುವ ಮಹಿಳೆಗೆ ಜಾಮೀನು ನೀಡಲು ಅವಕಾಶವಿದೆ. ಅದರಂತೆ ಅರ್ಜಿದಾರೆರೆಗೆ ಜಾಮೀನು ನೀಡಬೇಕು ಎಂದು ಕೋರಿದರು.

ಅರ್ಜಿದಾರೆ ಮೇಲಿನ ಆರೋಪಗಳ ಸ್ವರೂಪ ಮತ್ತು ಸಿಆರ್‌ಪಿಸಿ ಸೆಕ್ಷನ್‌ 437(1) ಅನ್ನು ಪರಿಗಣಿಸಿದ ಪೀಠವು ಅರ್ಜಿದಾರೆಗೆ ಜಾಮೀನು ನೀಡಿದೆ.

Kannada Bar & Bench
kannada.barandbench.com