ತಾಯಿ ಆರೈಕೆ ಮಾಡಲು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪುತ್ರನಿಗೆ ಎರಡು ತಿಂಗಳು ಪೆರೋಲ್‌ ಮಂಜೂರು ಮಾಡಿದ ಹೈಕೋರ್ಟ್‌

ಚಿಕಿತ್ಸೆ ಕೊಡಿಸಲು ಮತ್ತು ನೆರವಾಗಲು ಕುಟುಂಬದಲ್ಲಿ ಬೇರಾರೂ ಇಲ್ಲ. ಚಿಕಿತ್ಸೆ ಕಲ್ಪಿಸಲು ಮತ್ತು ಆರೈಕೆ ಮಾಡಲು ಮಗನ ಉಪಸ್ಥಿತಿ ಅನಿವಾರ್ಯವಾಗಿದೆ ಎಂದು ಮನವಿ ಮಾಡಿದ್ದ ತಾಯಿಯ ಕೋರಿಕೆ ಪುರಸ್ಕರಿಸಿದ ನ್ಯಾಯಾಲಯ.
Justice Hemant Chandangoudar
Justice Hemant Chandangoudar
Published on

ಎದೆನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತಾಯಿಯನ್ನು ಆರೈಕೆ ಮಾಡಲು ಮತ್ತು ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸಲು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪುತ್ರನಿಗೆ 60 ದಿನಗಳ ಕಾಲ ಪೆರೋಲ್‌ ಮಂಜೂರು ಮಾಡಿ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ತನಗೆ ಆರೈಕೆ ಮಾಡಲು ಮಗನಿಗೆ ಪೆರೋಲ್‌ ನೀಡಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ತಶಿನಾ ಬೇಗಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪುತ್ರ ಮೊಹಮ್ಮದ್ ಸೊಹೈಲ್‌ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿದ್ದಾನೆ. ನಾನು ರೆಟ್ರೋಸ್ಟರ್ನಲ್‌ ಡಿಸ್ಕಂಫರ್ಟ್‌ (ಎದೆಭಾಗದ ಒಳಗೆ ನೋವು) ಬೆನ್ನುನೋವು, ಅಧಿಕ ರಕ್ತದೊತ್ತಡ, ಥೈರಾಡ್‌ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಚಿಕಿತ್ಸೆ ಕೊಡಿಸಲು ಮತ್ತು ನೆರವಾಗಲು ಕುಟುಂಬದಲ್ಲಿ ಬೇರಾರೂ ಇಲ್ಲ. ಚಿಕಿತ್ಸೆ ಕಲ್ಪಿಸಲು ಮತ್ತು ಆರೈಕೆ ಮಾಡಲು ಮಗನ ಉಪಸ್ಥಿತಿ ಅನಿವಾರ್ಯವಾಗಿದೆ. ಪುತ್ರ ಕಳೆದ ಎರಡು ವರ್ಷ, ನಾಲ್ಕು ತಿಂಗಳಿಂದ ಜೈಲಿದ್ದಾನೆ. ಈ ಹಿಂದೆ ಪೆರೋಲ್ ಮೇಲೆ ಬಿಡುಗಡೆಯಾಗಿಲ್ಲ. ಆದ್ದರಿಂದ ಮಗನನ್ನು ಪೆರೋಲ್‌ ಮೇಲೆ ಬಿಡುಗಡೆಗೊಳಿಸಲು ಸರ್ಕಾರ ಮತ್ತು ಮಂಡ್ಯ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ತಶಿನಾ ಬೇಗಂ ನ್ಯಾಯಾಲಯಕ್ಕೆ ಕೋರಿದ್ದರು.

ಇದನ್ನು ಆಲಿಸಿದ ಪೀಠವು ತಾಯಿ ಆರೈಕೆ ಮಾಡಲು ಪುತ್ರನಿಗೆ ಪೆರೋಲ್‌ ಮಂಜೂರು ಮಾಡುವುದು ಅಗತ್ಯ. ಜೊತೆಗೆ, ಮಂಡ್ಯ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಅರ್ಜಿದಾರೆಯ ಪುತ್ರ ಮೊಹಮ್ಮದ್‌ ಸೊಹೈಲ್‌ ಅನ್ನು 60 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು. ಜೈಲಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಸುಹೈಲ್‌ಗೆ ಅಧೀಕ್ಷಕರು ಷರತ್ತು ವಿಧಿಸಬಹುದು. ಅಧೀಕ್ಷಕರು ವಿಧಿಸುವ ಯಾವುದೇ ಷರತ್ತು ಉಲ್ಲಂಘಿಸಿದರೂ ಸೊಹೈಲ್‌ಗೆ ಮಂಜೂರಾಗಿರುವ ಪೆರೋಲ್‌ ತನ್ನಿಂದ ತಾನೇ ರದ್ದಾಗುತ್ತದೆ ಎಂದು ಆದೇಶಿಸಿದೆ.

Kannada Bar & Bench
kannada.barandbench.com