ನರ್ಸಿಂಗ್‌ ಕಾಲೇಜುಗಳಿಂದ ಹೆಚ್ಚುವರಿ ಶುಲ್ಕ ವಸೂಲಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಿಂದ ನೋಟಿಸ್‌ ಜಾರಿ

ಶುಲ್ಕ ವಸೂಲಿ ಅಕ್ರಮದ ಬಗ್ಗೆ ಸಿಬಿಐನಿಂದ ಸಮಗ್ರ ತನಿಖೆ ನಡೆಸಬೇಕು ಅಥವಾ ಸರ್ಕಾರದ ತನಿಖಾ ಸಂಸ್ಥೆಗಳಾದ ಸಿಐಡಿ ಲೋಕಾಯುಕ್ತ ಸಂಸ್ಥೆ ಮೂಲಕ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
High Court of Karnataka
High Court of Karnataka
Published on

ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ನರ್ಸಿಂಗ್ ಕಾಲೇಜುಗಳಲ್ಲಿ ನಿಗದಿಗಿಂತ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ವೆಲ್‌ಫೆರ್ ಅಸೋಸಿಯೇಷನ್ ಆಫ್ ಪ್ರೊಫೆಷನಲ್‌ ಸ್ಕಾಲರ್ಸ್‌ ಇನ್ ಇಂಡಿಯಾ (ವಾಪಸಿ) ಅಧ್ಯಕ್ಷ ಕೇರಳ ರಾಜ್ಯದ ಸಾಮಾಜಿಕ ಕಾರ್ಯಕರ್ತ ಎಂ ಕೆ ಥಾಮಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಕರ್ನಾಟಕ ನರ್ಸಿಂಗ್ ಕೌನ್ಸಿಲ್, ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಮತ್ತಿತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿತು.

ಕರ್ನಾಟಕದ ಬಹುತೇಕ ನರ್ಸಿಂಗ್ ಕಾಲೇಜುಗಳಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ 2009ರಿಂದ ಅವೈಜ್ಞಾನಿಕವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದೊಂದು ದೊಡ್ಡ ಅಕ್ರಮವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಿದರೂ ಕ್ರಮ ಜರುಗಿಸಿಲ್ಲ. ಆದ್ದರಿಂದ, ಈ ಶುಲ್ಕ ವಸೂಲಿ ಅಕ್ರಮದ ಬಗ್ಗೆ ಸಿಬಿಐನಿಂದ ಸಮಗ್ರ ತನಿಖೆ ನಡೆಸಬೇಕು ಅಥವಾ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳಾದ ಸಿಐಡಿ ಲೋಕಾಯುಕ್ತ ಸಂಸ್ಥೆ ಮೂಲಕ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. 

Kannada Bar & Bench
kannada.barandbench.com