ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಆಯ್ಕೆಯಾಗಿ ಎಂಬಿಬಿಎಸ್ ಪ್ರವೇಶ ಪಡೆದು 2024 ಮತ್ತು 2025ನೇ ಸಾಲಿನಲ್ಲಿ ಕೋರ್ಸ್ ಪೂರ್ಣಗೊಳಿಸಿ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷದ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ವೈದ್ಯರ ಮಾಸಿಕ ವೇತನ ಕಡಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಲಬುರ್ಗಿ ನಿವಾಸಿ ಡಾ. ಶಶಿಕುಮಾರ್ ಸೇರಿ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ 38 ಮಂದಿ ಎಂಬಿಬಿಎಸ್ ಪದವೀಧರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೇ ಇದೇ ವಿಷಯವಾಗಿ ಸಲ್ಲಿಕೆಯಾಗಿರುವ ಇತರೆ ಅರ್ಜಿಗಳನ್ನು ಸಹ ಈ ಅರ್ಜಿಯೊಂದಿಗೆ ವಿಚಾರಣೆಗೆ ನಿಗದಿಪಡಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿತು. ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಗೆ ರಾಜ್ಯದಲ್ಲಿ ಸುಮಾರು 7,855 ವೈದ್ಯರಿಗೆ ನಿಯೋಜಿಸಲಾಗಿದೆ.
ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಮುಗಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಗೆ ನಿಯೋಜನೆಗೊಂಡ ವೈದ್ಯರಿಗೆ ಮಾಸಿಕ 62 ಸಾವಿರ ರೂಪಾಯಿ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ನಿಯೋಜನೆಗೊಂಡ ವೈದ್ಯರಿಗೆ ಮಾಸಿಕ ವೇತನ 75 ಸಾವಿರ ರೂಪಾಯಿ ನಿಗದಿಪಡಿಸಿ 2025ರ ಆಗಸ್ಟ್ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಏಕಾಏಕಿ 2025ರ ಅಕ್ಟೋಬರ್ 28ಕ್ಕೆ ಪರಿಷ್ಕೃತ ಅಧಿಸೂಚನೆ ಹೊರಡಿಸಿ ವೇತನವನ್ನು ಮಾಸಿಕ 60 ಸಾವಿರ ರೂಪಾಯಿಗೆ ಕಡಿತಗೊಳಿಸಲಾಗಿದೆ. ಇದು ಕಾನೂನು ಬಾಹಿರವಾಗಿದೆ. ಹಳೆಯ ಅಧಿಸೂಚನೆಯಂತೆ ಮಾಸಿಕ ವೇತನ ನೀಡಬೇಕು. ಅದರಂತೆಯೇ ಕಳೆದ ವರ್ಷ ಆಗಸ್ಟ್ ನಿಂದ ಇಲ್ಲಿವರೆಗೆ ವೇತನದ ಹಿಂಬಾಕಿ ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.