ಶಾಸಕ ಯೋಗೇಶ್ವರ್‌ ಪುತ್ರಿ ನಿಶಾ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ಬಂಧ ಆದೇಶ ತೆರವುಗೊಳಿಸಿದ ಹೈಕೋರ್ಟ್‌

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಎಕ್ಸ್‌ ಖಾತೆಗಳು ಹಾಗೂ ಅವುಗಳ ಲಿಂಕ್‌ಗಳನ್ನು ಡಿಲೀಟ್‌/ಬ್ಲಾಕ್‌ ಮಾಡಲು ನಿರ್ದೇಶಿಸಬೇಕು ಎಂದು ಕೋರಿ 2024ರಲ್ಲಿ ಯೋಗೇಶ್ವರ್ ಪತ್ನಿ ಶೀಲಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
Nisha Yogeshwar, C P Yogeshwara & Karnataka HC
Nisha Yogeshwar, C P Yogeshwara & Karnataka HC
Published on

ಚನ್ನಪಟ್ಟಣದ ಕಾಂಗ್ರೆಸ್ ಶಾಸಕ ಯೋಗೇಶ್ವರ್ ಅವರ ಪುತ್ರಿ ನಿಶಾ ಅವರ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಎಕ್ಸ್‌ ಖಾತೆ ಹಾಗೂ ಲಿಂಕ್‌ಗಳನ್ನು ಡಿಲೀಟ್‌/ಬ್ಲಾಕ್‌ ಮಾಡಲು ನಿರ್ದೇಶಿಸಿ ಕಳೆದ ವರ್ಷ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ತೆರವುಗೊಳಿಸಿದೆ.

ಯೋಗೇಶ್ವರ್‌ ಮತ್ತು ಅವರ ಕುಟುಂಬದ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳಿಕೆ ನೀಡದಂತೆ ಪುತ್ರಿ ನಿಶಾಗೆ ನಿರ್ದೇಶಿಸಬೇಕು. ಆಕೆಯ ಹೇಳಿಕೆಗಳನ್ನು ಪ್ರಸರಣ ಮಾಡಬಾರದು ಮತ್ತು ನಿಶಾ ಅವರ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಎಕ್ಸ್‌ ಖಾತೆಗಳು ಹಾಗೂ ಅವುಗಳ ಲಿಂಕ್‌ಗಳನ್ನು ಡಿಲಿಟ್‌/ಬ್ಲಾಕ್‌ ಮಾಡಲು ನಿರ್ದೇಶಿಸಬೇಕು ಎಂದು ಕೋರಿ 2024ರಲ್ಲಿ ಯೋಗೇಶ್ವರ್ ಪತ್ನಿ ಶೀಲಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು 2024ರ ನವೆಂಬರ್‌ 4ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ನಿಶಾ ಅವರ ಫೇಸ್‌ಬುಕ್‌, ಇನ್‌ಸ್ಟ್ರಾ ಗ್ರಾಂ ಮತ್ತು ಎಕ್ಸ್‌ ಖಾತೆಗಳು ಹಾಗೂ ಅವುಗಳ ಲಿಂಕ್‌ಗಳನ್ನು ಡಿಲೀಟ್‌/ಬ್ಲಾಕ್‌ ಮಾಡಲು ಆಯಾ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿತ್ತು. ಇದೀಗ ಯೋಗೇಶ್ವರ್ ಪತ್ನಿ ಶೀಲಾ ಅವರ ಅರ್ಜಿಯನ್ನು ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ಮಧ್ಯಂತ ಆದೇಶವನ್ನು ಸಹ ತೆರವುಗೊಳಿಸಿದೆ.

Also Read
ಯೋಗೇಶ್ವರ್‌ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿ ಹೇಳಿಕೆ: ಪುತ್ರಿ ನಿಶಾರನ್ನು ನಿರ್ಬಂಧಿಸಿದ ಹೈಕೋರ್ಟ್‌

ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಯೋಗೇಶ್ವರ್‌ ಮತ್ತವರ ಕುಟುಂಬದ ಬಗ್ಗೆ ನಿಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಲಿಂಕ್‌ಗಳನ್ನು ತೆಗೆದುಹಾಕಲು, ಆಕೆಯ ಹೇಳಿಕೆಗಳನ್ನು ಹರಡದಂತೆ ಮತ್ತು ಯೂಟ್ಯೂಬ್, ಎಕ್ಸ್‌, ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ ಖಾತೆಗಳನ್ನು ಡಿಲೀಟ್‌/ಬ್ಲಾಕ್ ಮಾಡಲು ನಿರ್ದೇಶಿಸುವಂತೆ ಕೋರಿ ಅರ್ಜಿದಾರೆ ಮನವಿ ಸಲ್ಲಿಸಿದ್ದರು. ಇದೇ ಮನವಿ ಸಂಬಂಧ ಸಿವಿಲ್‌ ಕೋರ್ಟ್‌ಗೂ ಮೂಲ ದಾವೆ ಸಲ್ಲಿಸಿದ್ದರು. ಇದರಿಂದ ಪ್ರಕರಣವನ್ನು ಅರ್ಜಿದಾರರು ಮತ್ತು ನಿಶಾ ಅವರು ಸಿವಿಲ್‌ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕು. ಪಕ್ಷಕಾರರ ಎಲ್ಲ ವಾದಾಂಶಗಳು ಮತ್ತು ತಮ್ಮ ಮನವಿ ಕುರಿತು ಅಗತ್ಯ ತಿದ್ದುಪಡಿ ಹಾಗೂ ಪರಿಹಾರ ಕೋರುವ ಅವಕಾಶ ಮುಕ್ತವಾಗಿರುತ್ತದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

Kannada Bar & Bench
kannada.barandbench.com