[ತೆರಿಗೆ ಬಾಕಿ ಪ್ರಕರಣ] ಮಂತ್ರಿ ಮಾಲ್‌ಗೆ ಹಾಕಿರುವ ಬೀಗ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

2024ರ ಮೇ 10ರಿಂದ ಕಾನೂನುಬಾಹಿರವಾಗಿ ಮಾಲ್‌ಗೆ ಬಿಬಿಎಂಪಿ ಬೀಗಹಾಕಿದೆ. ಇದರಿಂದ ಉದ್ಯೋಗಿಗಳಿಗೆ ಸಮಸ್ಯೆಯಾಗಿದ್ದು, ನಿತ್ಯ ಅಂದಾಜು 7 ರಿಂದ 8 ಕೋಟಿ ರೂಪಾಯಿ ವ್ಯಾಪಾರ ನಷ್ಟವಾಗುತ್ತಿದೆ ಎಂದ ಮಂತ್ರಿ ಮಾಲ್‌ ಪರ ವಕೀಲರು.
Mantri developers and Karnataka HC
Mantri developers and Karnataka HC

ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾದ 41 ಕೋಟಿ ರೂಪಾಯಿ ಆಸ್ತಿ ತೆರಿಗೆ ಹಣದ ಪೈಕಿ 20 ಕೋಟಿ ರೂಪಾಯಿಯನ್ನು 2024ರ ಜುಲೈ 31ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಮಲ್ಲೇಶ್ವರದ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಹಾಕಲಾಗಿರುವ ಬೀಗ ತೆಗೆಯುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿದೆ.

ಮಾಲ್‌ಗೆ ಬೀಗ ಹಾಕಿರುವ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಮಾಲ್‌ ಮಾಲೀಕರಾಗಿರುವ ಅಭಿಷೇಕ್‌ ಪ್ರಾಪ್‌ಬಿಲ್ಡ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಕಂಪೆನಿಯ ಹಣಕಾಸು ಅಧಿಕಾರಿ ಪ್ರಮಾಣ ಪತ್ರ ಸಲ್ಲಿಸಿ, 2024ರ ಜುಲೈ 31ರೊಳಗೆ 20 ಕೋಟಿ ರೂಪಾಯಿ ಹಣವನ್ನು ಬಿಬಿಎಂಪಿಗೆ ಪಾವತಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.

ಇದನ್ನು ದಾಖಲಿಸಿಕೊಂಡ ಪೀಠವು ಅರ್ಜಿದಾರ ಕಂಪೆನಿಯು 2024ರ ಜೂನ್‌ 1ರೊಳಗೆ 3.5 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸಬೇಕು. ಶುಕ್ರವಾರ (ಮೇ 17) ಬೆಳಗ್ಗೆ 10 ಗಂಟೆಯಿಂದ ಮಾಲ್‌ ಹಾಕಿರುವ ಬೀಗವನ್ನು ಬಿಬಿಎಂಪಿ ತೆಗೆಯಬೇಕು ಎಂದು ಸೂಚಿಸಿ ಷರತ್ತುಬದ್ಧ ಮಧ್ಯಂತರ ಆದೇಶ ಮಾಡಿತು.

ಇದಕ್ಕೂ ಮುನ್ನ, ಅರ್ಜಿದಾರ ಕಂಪೆನಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ಮಾಲ್‌ನಲ್ಲಿ 250ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಕೇಂದ್ರಗಳಿವೆ. ಸುಮಾರು 2,500 ಉದ್ಯೋಗಿಗಳಿದ್ದಾರೆ. 2024ರ ಮೇ 10ರಿಂದ ಕಾನೂನುಬಾಹಿರವಾಗಿ ಮಾಲ್‌ಗೆ ಬಿಬಿಎಂಪಿ ಬೀಗಹಾಕಿದೆ. ಇದರಿಂದ ಉದ್ಯೋಗಿಗಳಿಗೆ ಸಮಸ್ಯೆಯಾಗಿದ್ದು, ನಿತ್ಯ ಅಂದಾಜು 7 ರಿಂದ 8 ಕೋಟಿ ರೂಪಾಯಿ ವ್ಯಾಪಾರ ನಷ್ಟವಾಗುತ್ತಿದೆ ಎಂದರು.

ಮಾಲ್‌ ಮೇಲೆ ಬ್ಯಾಂಕ್‌ ಸಾಲದ ಮರುಪಾವತಿಯ ಹೊಣೆಯಿದೆ. ಬೀಗ ಹಾಕಿರುವುದರಿಂದ ಗಂಭೀರ ಸಮಸ್ಯೆಯಾಗಿದೆ. ಬಿಬಿಎಂಪಿ ಐದನೇ ಬಾರಿಗೆ ಮಾಲ್‌ ಮುಚ್ಚಿಸಿದೆ. ಈ ನಡೆ ಮಳಿಗೆಗಳ ಬಾಡಿಗೆದಾರರು ಅರ್ಜಿದಾರರ ವಿರುದ್ಧ ದಾವೆ ಹೂಡಲು ಮತ್ತು ಬಾಡಿಗೆ ಪಾವತಿಸಲು ನಿರಾಕರಿಸುವುದನ್ನು ಪ್ರೇರೇಪಿಸುತ್ತದೆ. ಅಕ್ಷಯ ತೃತೀಯ ದಿನದಿಂದ ಮಾಲ್‌ ಒಳಗಿರುವ ಚಿನ್ನಾಭರಣ ಮಳಿಗೆಗಳ ವ್ಯಾಪಾರಕ್ಕೆ ಅಡಚಣೆ ಉಂಟಾಗಿ, ದೊಡ್ಡ ನಷ್ಟವಾಗಿದೆ ಎಂದು ಆರೋಪಿಸಿದರು.

ಬಿಬಿಎಂಪಿ ಪರ ವಕೀಲರು, 2018ರ ನಂತರದಿಂದ ಮಾಲ್‌ಗೆ ಸಂಬಂಧಿಸಿದಂತೆ ಅರ್ಜಿದಾರರು ಒಟ್ಟು 41 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಪೀಠದ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಮಾಲ್‌ಗೆ ಹಾಕಿರುವ ಬೀಗ ತೆರೆಯಲು ಬಿಬಿಎಂಪಿಗೆ ಸೂಚಿಸಿತು.

ಪ್ರಕರಣದ ಹಿನ್ನೆಲೆ: ಒಟ್ಟು 41 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಮೇ 10ರಂದು ಮಂತ್ರಿ ಮಾಲ್‌ಗೆ ಬೀಗ ಹಾಕಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಕಂಪೆನಿ ಸಿಟಿ ಸಿವಿಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿದಾರರು ಬಾಕಿಯಿರುವ ಪೈಕಿ ಶೇ.50ರಷ್ಟು ತೆರಿಗೆ ಹಣವನ್ನು 10 ದಿನಗಳಲ್ಲಿ ಬಿಬಿಎಂಪಿಗೆ ಪಾವತಿಸಬೇಕು. ಹಣ ಪಾವತಿಸಿದ ನಂತರ ಬಿಬಿಎಂಪಿಯು ಬೀಗ ತೆರೆದು ಮಾಲ್‌ನಲ್ಲಿ ವ್ಯಾಪಾರ ವಹಿವಾಟು ನಡೆಸಲು ಹಾಗೂ ಮಾಲ್‌ ಒಳಗೆ ಪ್ರವೇಶಿಸಲು ಹಾಗೂ ಹೊರಗೆ ನಿರ್ಗಮಿಸಲು ಅರ್ಜಿದಾರರಿಗೆ, ಮಳಿಗೆದಾರರಿಗೆ ಮತ್ತು ಉದ್ಯೋಗಿಗಳಿಗೆ ಬಿಬಿಎಂಪಿ ಅನುಮತಿ ನೀಡಬೇಕು ಎಂದು ಬುಧವಾರ (ಮೇ 15ರಂದು) ನಿರ್ದೇಶಿಸಿತ್ತು. ಇದರಿಂದ ಅರ್ಜಿದಾರ ಕಂಪೆನಿ ಹೈಕೋರ್ಟ್‌ ಮೊರೆ ಹೋಗಿತ್ತು.

Related Stories

No stories found.
Kannada Bar & Bench
kannada.barandbench.com