ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಪಾಸ್‌ಪೋರ್ಟ್‌ ನವೀಕರಣಕ್ಕೆ ಹೈಕೋರ್ಟ್‌ ಆದೇಶ

ಪಾಸ್‌ಪೋರ್ಟ್‌ ನವೀಕರಿಸಲು ನಿರ್ದೇಶಿಸಬೇಕು ಎಂದು ಕೋರಿ ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
Karnataka High Court and farmer DyCM K S Eshwarappa
Karnataka High Court and farmer DyCM K S Eshwarappa
Published on

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರ ಪಾಸ್ ಪೋರ್ಟ್ ನವೀಕರಣ ಮಾಡುವಂತೆ  ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗೆ ಬುಧವಾರ ಆದೇಶಿಸಿರುವ ಕರ್ನಾಟಕ ಹೈಕೋರ್ಟ್‌ ಈ ಸಂಬಂಧ ಈಶ್ವರಪ್ಪ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. 

ಪಾಸ್‌ಪೋರ್ಟ್‌ ನವೀಕರಿಸಲು ನಿರ್ದೇಶಿಸಬೇಕು ಎಂದು ಕೋರಿ ಈಶ್ವರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ ವಿನೋದ್‌ ಕುಮಾರ್ ಅವರು “ಅರ್ಜಿದಾರರ ವಿರುದ್ಧದ ಏಳು ಕ್ರಿಮಿನಲ್ ಪ್ರಕರಣಗಳಲ್ಲಿ ಐದು ವಿಚಾರಣೆಗೆ ಬಾಕಿ ಇವೆ. ಇದರಿಂದ ನವೀಕರಣಕ್ಕೆ ತಕರಾರು ತೆಗೆಯಲಾಗುತ್ತಿದ್ದು, ಪೊಲೀಸ್ ‍ಪರಿಶೀಲನೆ ವಿಳಂಬವಾಗುತ್ತಿದೆ. ಆದ್ದರಿಂದ, ಪಾಸ್‌ಪೋರ್ಟ್‌ ನವೀಕರಿಸಲು ನಿರ್ದೇಶಿಸಬೇಕು” ಎಂದು ಮನವಿ ಮಾಡಿದರು.

Also Read
ಪ್ರಚೋದನಕಾರಿ ಭಾಷಣ: ಈಶ್ವರಪ್ಪ ವಿರುದ್ಧದ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

ಇದನ್ನು ಮಾನ್ಯ ಮಾಡಿದ ಪೀಠವು ಕೆಲವು ಷರತ್ತುಗಳನ್ನು ವಿಧಿಸಿ ಒಂದು ವರ್ಷದವರೆಗೆ ಪಾಸ್‌ಪೋರ್ಟ್ ನವೀಕರಿಸಲು ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗೆ ಆದೇಶಿಸಿತು. ದೇಶದಿಂದ ಹೊರಗೆ ಹೋಗುವಾಗ ಪ್ರವಾಸದ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ, ನ್ಯಾಯಾಲಯಕ್ಕೆ ಒದಗಿಸಬೇಕು. ವಿದೇಶದಿಂದ ಬಂದ ನಂತರವೂ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಪೀಠ ಅರ್ಜಿದಾರರಿಗೆ ನಿರ್ದೇಶಿಸಿದೆ.

Kannada Bar & Bench
kannada.barandbench.com