ಶಿವಮೊಗ್ಗ‌ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರ ಚುನಾವಣೆ: ಮೇ 25ರವರೆಗೆ ಚುನಾವಣೆ ನಡೆಸದಿರಲು ಹೈಕೋರ್ಟ್‌ ಆದೇಶ

ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಕ್ರಮವಾಗಿ ಚುನಾವಣೆ ನಡೆಸಿದ್ದ ಚುನಾವಣಾಧಿಕಾರಿ, ಚನ್ನಗಿರಿ ಮತ್ತು ಸಾಗರ ತಾಲ್ಲೂಕು ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌ ಅವರಿಗೆ ತಲಾ ರೂ. 10 ಸಾವಿರ ದಂಡ ವಿಧಿಸಿ ಏಕಸದಸ್ಯ ಪೀಠ ತೀರ್ಪು ನೀಡಿತ್ತು.
Karnataka High Court
Karnataka High Court

ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೇ 25ರವರೆಗೆ ಚುನಾವಣೆ ನಡೆಸದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಆರು ವಾರಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಏಕಸದಸ್ಯ ಪೀಠವು ಏಪ್ರಿಲ್‌ ಕೊನೆಯ ವಾರದಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಹಿಂದಿನ ಅಧ್ಯಕ್ಷ ಎನ್ ಎಚ್ ಶ್ರೀಪಾದರಾವ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಎಂ ಜಿ ಉಮಾ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ನಡೆಸಿತು.

ನ್ಯಾಯಾಲಯದ ಬೇಸಿಗೆ ರಜೆ ಮುಗಿದ ಬಳಿಕ ಪ್ರಕರಣವನ್ನು ಸಾಮಾನ್ಯ ವಿಭಾಗೀಯ ಪೀಠವು ಆಲಿಸಿ ನಿರ್ಧಾರ ಕೈಗೊಳ್ಳಲಿದೆ. ಹೀಗಾಗಿ, ಅಲ್ಲಿಯವರೆಗೆ ರಾಜ್ಯ ಸರ್ಕಾರವು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನದಿಂದ ಎಚ್ ಕೆ ಬಸಪ್ಪ ಹಾಗೂ ಟಿ ಶಿವಶಂಕರಪ್ಪ ಅವರನ್ನು ಅನರ್ಹಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಅಲ್ಲದೇ, ಮುಂದಿನ ಆರು ವಾರಗಳಲ್ಲಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.

ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದಿದ್ದ ಪೀಠವು ಅರ್ಜಿದಾರರನ್ನು ಸಂಘದ ನಿರ್ದೇಶಕರ ಸ್ಥಾನದಿಂದ ವಜಾಗೊಳಿಸಿರುವ ಚನ್ನಗಿರಿ ಮತ್ತು ಸಾಗರ ತಾಲ್ಲೂಕು ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್‌ ಅವರುಗಳಿಗೆ ತಲಾ ರೂ. 10 ಸಾವಿರ ದಂಡವನ್ನು ವಿಧಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಅಕ್ರಮವಾಗಿ ಚುನಾವಣೆ ನಡೆಸಿದ್ದ ಚುನಾವಣಾಧಿಕಾರಿಗೂ ಸಹ ರೂ. 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು.

Also Read
ಶಿವಮೊಗ್ಗ‌ ಹಾಲು ಉತ್ಪಾದಕರ ಸಂಘದ ನಾಮನಿರ್ದೇಶಿತ ಸದಸ್ಯರ ಅನರ್ಹ ಆದೇಶ ರದ್ದು; ಚುನಾವಣಾಧಿಕಾರಿಗೆ ಹೈಕೋರ್ಟ್‌ ದಂಡ

ಪ್ರಕರಣದ ಹಿನ್ನೆಲೆ: ಚನ್ನಗಿರಿಯ ಕಂಚುಗರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದ ಎಚ್ ಕೆ ಬಸಪ್ಪ ಮತ್ತು ಹಿರೇಜಂಬೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದ ಟಿ ಶಿವಶಂಕರಪ್ಪ ಅವರನ್ನು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸರ್ಕಾರ ನಾಮನಿರ್ದೇಶನ ಮಾಡಿತ್ತು. ನಂತರ ಆರ್ಥಿಕ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಈ ಇಬ್ಬರ ನಾಮ ನಿರ್ದೇಶನವನ್ನು ಅನೂರ್ಜಿತಗೊಳಿಸಿ 2021ರ ಡಿಸೆಂಬರ್‌ 31ರಂದು ಆದೇಶಿಸಲಾಗಿತ್ತು. ಅವರ ಸ್ಥಾನಕ್ಕೆ ಹರೀಶ್ ಮತ್ತು ವಿಕ್ರಂ ಪಾಟೀಲ್ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಇದನ್ನು ಶಿವಶಂಕರಪ್ಪ ಮತ್ತು ಬಸಪ್ಪ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ನಾಮ ನಿರ್ದೇಶನ ಆದೇಶವನ್ನು ಅನೂರ್ಜಿತಗೊಳಿಸುವ ಮುನ್ನ ತಮಗೆ ಜಾರಿ ಮಾಡಿದ ನೋಟಿಸ್‌ಗೆ ಉತ್ತರಿಸಲು ಸೂಕ್ತ ಕಾಲಾವಕಾಶ ನೀಡಿಲ್ಲ. ನಾಮನಿರ್ದೇಶನ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ. ಇದು ಕಾನೂನು ಬಾಹಿರ ಕ್ರಮ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಇದನ್ನು ಏಕಸದಸ್ಯ ಪೀಠವು ಪುರಸ್ಕರಿಸಿತ್ತು. ಈಗ ಆ ಆದೇಶವನ್ನು ಪ್ರಶ್ನೆ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com