
“ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧು-ವರರಿಗೆ ನೀಡುವ ಉಡುಗೊರೆ, ಯಾಕೆಂದರೆ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಬೇಕು” ಎಂದು ಆಮಂತ್ರಣ ಪತ್ರಿಕೆಯಲ್ಲಿ ಮತ ಯಾಚನೆ ಮಾಡಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಶಿವಪ್ರಸಾದ್ ಎಂಬುವರ ವಿರುದ್ದ ಚುನಾವಣಾಧಿಕಾರಿ ಹೂಡಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ತಮ್ಮ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 127Aಎ (ಕರಪತ್ರ, ಪೋಸ್ಟರ್ ಇತ್ಯಾದಿ ಮುದ್ರಣಕ್ಕೆ ನಿರ್ಬಂಧ) ಅಡಿ ದಾಖಲಾಗಿರುವ ಪ್ರಕರಣ ಮತ್ತು ಆನಂತರದ ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಆಲಂತಾಯ ಗ್ರಾಮದ ಶಿವಪ್ರಸಾದ್ ಮತ್ತು ಗೌಳಿತೊಟ್ಟು ಗ್ರಾಮದ ಎ ಬಾಲಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗಿದ್ದು, ಪ್ರಕರಣ ರದ್ದುಪಡಿಸಲಾಗಿದೆ” ಎಂದು ನ್ಯಾಯಾಲಯವು ಸೂಚ್ಯವಾಗಿ ಆದೇಶಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಂ ವಿನೋದ್ ಕುಮಾರ್ ಅವರು “ಚುನಾವಣೆಗೂ ಮುನ್ನ ಆಹ್ವಾನ ಪತ್ರಿಕೆ ಮುದ್ರಿಸಲಾಗಿತ್ತು. ಹಾಲಿ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಎಂ ಇಷ್ತಿಯಾಕ್ ಅಹ್ಮದ್ ವರ್ಸಸ್ ರಾಜ್ಯ ಸರ್ಕಾರ ಹಾಗೂ ಅಟ್ಟಿಕಾ ಗೋಲ್ಡ್ ವರ್ಸಸ್ ರಾಜ್ಯ ಸರ್ಕಾರ ಪ್ರಕರಣಗಳಲ್ಲಿ ನೀಡಿರುವ ತೀರ್ಪು ಅನ್ವಯಿಸುತ್ತದೆ” ಎಂದರು.
ನವೆಂಬರ್ 11ರಂದು ಮಧ್ಯಂತರ ಆದೇಶ ಮಾಡುವಾಗ ಪೀಠವು ಅರ್ಜಿದಾರ/ಆರೋಪಿಗಳ ವಿರುದ್ಧ ವಿಚಿತ್ರ ಆರೋಪ ಮಾಡಲಾಗಿದೆ ಎಂದಿತ್ತು.
2024ರ ಲೋಕಸಭಾ ಚುನಾವಣೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ಕೆ ಎನ್ ಸಂದೇಶ್ ಅವರು ಶಿವಪ್ರಸಾದ್ ವಿರುದ್ಧ ಪ್ರಜಾ ಪ್ರತಿನಿಧಿಗಳ ಕಾಯಿದೆ 127ಎ ಅನ್ವಯ ಪ್ರಕರಣ ಹೂಡಿದ್ದರು.