
ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಮರ್ಷಿಯಲ್‌ನಿಂದ ಇಂಡಸ್ಟ್ರೀಸ್ ಟಾರಿಫ್‌ಗೆ ಪರಿವರ್ತಿಸಲು ತನ್ನ ಮೇಲಧಿಕಾರಿ ಪಡೆದ ಲಂಚದ ಹಣವನ್ನು ಕಾರಿನಲ್ಲಿ ಇರಿಸಿದ್ದ ಆರೋಪದ ಮೇಲೆ ಚಾಲಕನ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದ್ದು, ಬಡ ಚಾಲಕ ಪರಿಸ್ಥಿತಿಯ ಸಂತ್ರಸ್ತ ಎಂದಿದೆ.
ಗುತ್ತಿಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರ್ ಮುರಳಿ ಕೃಷ್ಣ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.
“ಮೊದಲ ಆರೋಪಿ ಬೆಸ್ಕಾಂನ ಕಾರ್ಯಾಚರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ನಾಗರಾಜು ಅವರು ಲಂಚಕ್ಕೆ ಬೇಡಿಕೆ ಇಟ್ಟು, ಅದನ್ನು ಪಡೆದುಕೊಂಡಿದ್ದಾರೆ. ಬಡ ಚಾಲಕ ಪರಿಸ್ಥಿತಿಯ ಸಂತ್ರಸ್ತನಾಗಿದ್ದಾನೆ” ಎಂದು ನ್ಯಾಯಾಲಯ ಹೇಳಿದೆ.
“ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 2 ಮತ್ತು 7ರ ವಿವರಣೆಯನ್ನು ಪ್ರಾಸಿಕ್ಯೂಷನ್ ಆಧರಿಸಿದೆ. ತನ್ನ ಮುಂದೆ ನಡೆಯುತ್ತಿರುವ ಹಣದ ವರ್ಗಾವಣೆ ಬಗ್ಗೆ ಗುತ್ತಿಗೆ ಚಾಲಕನಿಗೆ ತಿಳಿದಿಲ್ಲ. ಮುಖ್ಯ ಪ್ರಧಾನ ವ್ಯವಸ್ಥಾಪಕ ನಾಗರಾಜು ಅವರು ಕಾರಿನ ಡಿಕ್ಕಿಯಲ್ಲಿ ಬ್ಯಾಗ್ ಇಡುವಂತೆ ಸೂಚಿಸಿರುವುದನ್ನು ಆತ ಪಾಲಿಸಿದ್ದಾನೆ. ಕರೆ ರೆಕಾರ್ಡಿಂಗ್ ಅನ್ನು ಪ್ರಾಸಿಕ್ಯೂಷನ್ ಆಧರಿಸಿದ್ದು, ಅದು ಮೊದಲ ಆರೋಪಿಗೆ ಸಂಬಂಧಿಸಿದ್ದಾಗಿದ್ದು, ಲಂಚ ಬೇಡಿಕೆ ಮತ್ತು ಪಡೆಯುವುದರಲ್ಲಿ ಅರ್ಜಿದಾರನ ಪಾತ್ರದ ಕುರಿತು ಗಂಭೀರ ಮೌನ ತಾಳಲಾಗಿದೆ. ಘಟನಾ ಸ್ಥಳದಲ್ಲಿ ಕಾರು ಚಾಲಕ ಉಪಸ್ಥಿತನಿದ್ದು, ತನ್ನ ಮೇಲಧಿಕಾರಿಯ ಆಜ್ಞೆ ಪಾಲಿಸಿದ್ದಕ್ಕಾಗಿ ಅಪರಾಧದ ಬಲೆಯಲ್ಲಿ ಸಿಲುಕಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಭ್ರಷ್ಟಾಚಾರ ಆರೋಪವನ್ನು ಅಲ್ಲಗಳೆಯಬೇಕಿರುವುದು ನಾಗರಾಜು ಮಾತ್ರ. 40 ದಿನಗಳ ಹಿಂದೆ ಕರ್ತವ್ಯಕ್ಕೆ ಸೇರಿರುವ ಗುತ್ತಿಗೆ ಕಾರು ಚಾಲಕನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗದು. ಒಂದೊಮ್ಮೆ ಘಟನೆ ಸತ್ಯವಾದರೂ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 7(ಎ) ಅನ್ವಯಿಸುವುದಿಲ್ಲ. ಹೀಗಾಗಿ, ತನಿಖೆ ಮತ್ತು ಆರೋಪ ಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಡುವುದು ಕಾನೂನಿನ ದುರ್ಬಳಕೆಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಲೋಕಾಯುಕ್ತ ಪರ ವಕೀಲ ಬಿ ಬಿ ಪಾಟೀಲ್ ಅವರು “ಸರ್ಕಾರಿ ಅಧಿಕಾರಿಯ ಪರವಾಗಿ ಯಾರೇ ಲಂಚ ಸ್ವೀಕರಿಸಿದರೂ ಅದು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 7(ಎ) ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ವಿಚಾರಣೆಯಲ್ಲಿ ಅವರು ಆರೋಪ ಮುಕ್ತವಾಗಿ ಬರಬೇಕು” ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಅರ್ಜಿದಾರನ ಪರವಾಗಿ ವಕೀಲ ಎಸ್ ಪ್ರಶಾಂತ್ ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಮರ್ಷಿಯಲ್‌ನಿಂದ ಇಂಡಸ್ಟ್ರೀಸ್ ಟಾರಿಫ್‌ಗೆ ಪರಿವರ್ತಿಸಲು ಮೊದಲಿಗೆ ಹತ್ತು ಲಕ್ಷಕ್ಕೆ ಬೇಡಿಕೆ ಇಟ್ಟು, ಆನಂತರ ಅದನ್ನು ₹7.5 ಲಕ್ಷ ಲಂಚಕ್ಕೆ ನಾಗರಾಜು ಇಳಿಕೆ ಮಾಡಿದ್ದರು. ಈ ನಡುವೆ, ದೂರುದಾರ 22-11-2023ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಟ್ರ್ಯಾಪ್ ನಡೆದ ದಿನ ನಾಗರಾಜು ಅವರು 23-11-2023ರಂದು ಕಾರು ಚಾಲಕ ಮುರಳಿ ಅವರನ್ನು 3 ಗಂಟೆಗೆ ಕಚೇರಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಬಂದು ಕ್ಯಾಬಿನ್‌ನಲ್ಲಿದ್ದ ಮುರಳಿಯನ್ನು ಕರೆದು ಬ್ಯಾಗ್ ಕೊಟ್ಟು ಅದನ್ನು ಕಾರ್ ಡಿಕ್ಕಿಯಲ್ಲಿಡಲು ಸೂಚಿಸಿದ್ದರು. ಕಾರು ಚಾಲಕ ಬ್ಯಾಗ್ ಅನ್ನು ಕಾರಿನ ಡಿಕ್ಕಿಯಲ್ಲಿಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಮುರಳಿಯನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ, ಮುರಳಿ ಹೈಕೋರ್ಟ್ ಕದತಟ್ಟಿದ್ದರು.