[ಜಾರಕಿಹೊಳಿ ಸಿ ಡಿ ಪ್ರಕರಣ] ಮೂವರು ಪೊಲೀಸ್‌ ಅಧಿಕಾರಿಗಳ ವಿರುದ್ಧದ ತನಿಖೆ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್

ಅರ್ಜಿದಾರ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿರುವ ಮ್ಯಾಜಿಸ್ಟ್ರೇಟ್‌ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.
Ramesh Jarkiholi and Karnataka HC
Ramesh Jarkiholi and Karnataka HC

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್‌ ಕಲ್ಲಹಳ್ಳಿ ದಾಖಲಿಸಿದ್ದ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಲು ವಿಫಲವಾದ ಕಾರಣಕ್ಕೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಸಹಿತ ಮೂವರು ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಎಂಟನೇ ಎಸಿಎಂಎಂ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪೊಲೀಸ್ ಆಯುಕ್ತ ಕಮಲ್ ಪಂಥ್, ಡಿಸಿಪಿ ಅನುಚೇತ್ ಹಾಗೂ ಕಬ್ಬನ್‌ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್ ಮಾರುತಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರ ಏಕಸದಸ್ಯ ಪೀಠವು ಮಂಗಳವಾರ ನಡೆಸಿತು.

ವಕೀಲ ಪಿ. ಪ್ರಸನ್ನ ಕುಮಾರ್ ಮೂವರು ಪೊಲೀಸ್‌ ಅಧಿಕಾರಿಗಳ ಪರ ವಾದ ಮಂಡಿಸಿದರು. ದಿನೇಶ್‌ ಕಲ್ಲಹಳ್ಳಿ ಅವರು ದೂರು ನೀಡಿದಾಗಲೇ ಕಬ್ಬನ್‌ಪಾರ್ಕ್‌ ಪೊಲೀಸರು ಪ್ರಾಥಮಿಕ ವಿಚಾರಣೆ ಕೈಗೊಂಡು ನೋಟಿಸ್‌ ಜಾರಿಗೊಳಿಸಿದ್ದಾರೆ. ದೂರುದಾರರು ಪೊಲೀಸರ ಮುಂದೆ ಹಾಜರಾಗಿ ಸಂತ್ರಸ್ತೆಯು ಉತ್ತರ ಕರ್ನಾಟಕದ ಮೂಲದವರಾಗಿದ್ದು ಬೆಂಗಳೂರಿನ ಆರ್ ಟಿ ನಗರದಲ್ಲಿ ವಾಸವಿದ್ದಾರೆ ಎನ್ನುವ ಮಾಹಿತಿಯಷ್ಟೇ ತಮಗೆ ತಿಳಿದಿದೆ ಎಂದಿದ್ದಾರೆ.

ಮುಂದೆ ದೂರುದಾರರೇ ಪ್ರಕರಣವನ್ನು ಹಿಂಪಡೆದರೂ ಸಹ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದಕ್ಕಾಗಿ ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಅಲ್ಲದೆ, ಸ್ವತಃ ಸಂತ್ರಸ್ತೆಯೇ ಮಾರ್ಚ್ 26ರಂದು ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದರು. ಇದರ ತನಿಖಾ ಹೊಣೆಯನ್ನು ಮಹಿಳಾ ಎಸಿಪಿ ಎಂ ಸಿ ಕವಿತಾ ಅವರಿಗೆ ನೀಡಲಾಗಿತ್ತು. ಅವರು ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಿದ್ದಾರೆ ಎನ್ನುವ ಇನ್ನು ಮುಂತಾದ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಅಂತಿಮವಾಗಿ ನ್ಯಾಯಾಲಯವು, ದೂರುದಾರರು ಈ ಮೇಲಿನ ಸಂಗತಿಗಳನ್ನು ಎಂಟನೇ ಎಸಿಎಂಎಂ ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಅಲ್ಲದೆ, ಅರ್ಜಿದಾರ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿರುವ ಮ್ಯಾಜಿಸ್ಟ್ರೇಟ್‌ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟು ಮೂವರು ಅಧಿಕಾರಿಗಳ ವಿರುದ್ಧದ ತನಿಖೆಯ ಆದೇಶವನ್ನು ರದ್ದುಪಡಿಸಿತು.

Related Stories

No stories found.
Kannada Bar & Bench
kannada.barandbench.com