

ಕಳೆದ ಐದು ವರ್ಷಗಳಲ್ಲಿ ನಡೆದಿರುವ ಪೊಲೀಸ್ ಕಸ್ಟಡಿ ಸಾವುಗಳಲ್ಲಿನ (ಲಾಕಪ್ ಡೆತ್) ತನಿಖೆ, ಪ್ರಾಸಿಕ್ಯೂಷನ್, ಸಂತ್ರಸ್ತರಿಗೆ ಪರಿಹಾರ ಮತ್ತು ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡುವ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಕೋರಿಕೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್-ಕರ್ನಾಟಕವು ಸಲ್ಲಿಸಿದ್ದ ಐದು ಮನವಿಗಳ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಕಸ್ಟಡಿ ಸಾವುಗಳ ಕುರಿತು ಹಲವು ತೀರ್ಪುಗಳು ಬಂದಿವೆ. ನಿಮಗೆ ಯಾವ ಆದೇಶ ಬೇಕು” ಎಂದಿತು. ಆಗ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೋಜಾರಿಯೊ ಅವರು “ಕಸ್ಟಡಿ ಸಾವಿನ ಬಗ್ಗೆ ಪರಿಹಾರ ಕೋರುತ್ತಿಲ್ಲ, ಕಸ್ಟಡಿಯಲ್ಲಿನ ಕಿರುಕುಳದ ಬಗ್ಗೆ ಕೇಳುತ್ತಿದ್ದೇವೆ” ಎಂದರು.
ಈ ವೇಳೆ ಪೀಠವು “ಕಸ್ಟಡಿಯಲ್ಲಿನ ಕಿರುಕುಳದ ಬಗ್ಗೆಯೂ ಹಲವು ತೀರ್ಪು ಬಂದಿವೆ. ವ್ಯಕ್ತಿಯನ್ನು ಬಂಧಿಸಿದ ನಂತರ ಪಾಲಿಸಬೇಕಾದ ಪ್ರಕ್ರಿಯೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಪ್ರಕ್ರಿಯೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ನಿರ್ದೇಶನ ನೀಡಬಹುದು. ಕಿರುಕುಳ ನೀಡಿರುವುದು ಸಾಬೀತಾದ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹಲವು ಆದೇಶಗಳಲ್ಲಿ ಸಂತ್ರಸ್ತರಿಗೆ ಪರಿಹಾರಕ್ಕೆ ಆದೇಶಿಸಿದೆ” ಎಂದಿತು.
ಅಂತಿಮವಾಗಿ ಅರ್ಜಿದಾರರ ಐದು ಕೋರಿಕೆಗಳ ಪೈಕಿ ಐದನೇ ಕೋರಿಕೆಯಾದ 2025ರ ನವೆಂಬರ್‌ನಲ್ಲಿ ಸಣ್ಣೇನಹಳ್ಳಿಯ ದರ್ಶನ್ ಎಂಬ ಯುವಕನನ್ನು ಕರೆದೊಯ್ದು ಗಂಭೀರವಾಗಿ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣವಾದ ಆರೋಪ ಸಂಬಂಧ ವಿವೇಕನಗರ ಠಾಣಾ ಪೊಲೀಸರ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಜೊತೆಗೆ ರಾಜ್ಯ ಸರ್ಕಾರ, ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿದೆ.
ಕಸ್ಟಡಿಯಲ್ಲಿನ ಕಿರುಕುಳ ಮತ್ತು ಸಾವನ್ನು ತಡೆಯಲು ಕಡ್ಡಾಯ ವೈದ್ಯಕೀಯ ಪರೀಕ್ಷೆ, ಎಫ್‌ಐಆರ್ ದಾಖಲು, ಮಾಜಿಸ್ಟೀರಿಯಲ್ ತನಿಖೆ, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಒಳಗೊಂಡು ಸಮಗ್ರ ಶಿಷ್ಟಾಚಾರ ರೂಪಿಸಲು ನಿರ್ದೇಶಿಸಬೇಕು. ಕಸ್ಟಡಿಯಲ್ಲಿನ ದೌರ್ಜನ್ಯ ಮತ್ತು ಸಾವುಗಳ ಸಂಬಂಧ ಕಠಿಣ ಮತ್ತು ಪಾರದರ್ಶಕ ಕ್ರಮಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳು ಚಾಲ್ತಿಯಲ್ಲಿರಬೇಕು. ಸಿಸಿಟಿವಿ ಸರಿಯಾಗಿ ಕೆಲಸ ಮಾಡದ ಠಾಣೆಯಲ್ಲಿನ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಲಾಗಿತ್ತು. ಈ ಕೋರಿಕೆಗಳನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.
ದರ್ಶನ್ ಸಾವಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು. ಕಾಲಮಿತಿಯಲ್ಲಿ ಹೈಕೋರ್ಟ್ ನಿಗಾದಲ್ಲಿ ತನಿಖೆ ಕೈಗೊಳ್ಳಬೇಕು. ದರ್ಶನ್ ಕುಟುಂಬದವರಿಗೆ 50 ಲಕ್ಷ ರೂಪಾಯಿ ಪರಿಹಾರಕ್ಕೆ ಆದೇಶಿಸಬೇಕು. ದರ್ಶನ್ ಕುಟುಂಬದವರಿಗೆ ರಕ್ಷಣ ಒದಗಿಸಬೇಕು ಎಂದು ಕೋರಿರುವ ಮನವಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.