ತೃತೀಯ ಲಿಂಗಿ ವಿರುದ್ಧ ಸರಗಳ್ಳತನ ಆರೋಪ: ದರೋಡೆ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಹೆದ್ದಾರಿಯಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮತ್ತು ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸುತ್ತಿದ್ದ ಸವಾರರ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿ ಕತ್ತಿನಲ್ಲಿದ್ದ ಸರ ಕದ್ದ ಆರೋಪ ಅಭಿಷೇಕ್‌ ವಿರುದ್ಧವಿದೆ.
Justice M Nagaprasanna
Justice M Nagaprasanna
Published on

ಸರಗಳ್ಳತನ ಆರೋಪದ ಸಂಬಂಧ ತೃತೀಯ ಲಿಂಗಿಯೊಬ್ಬರ ವಿರುದ್ಧ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಮೂರು ದರೋಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿದೆ. ಅರ್ಜಿದಾರರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಿದರೆ, ಸರಗಳ್ಳತನ ಆರೋಪದ ಪ್ರಕರಣಗಳಿಗೆ ಅನುಮತಿ ನೀಡಿದಂತಾಗುತ್ತದೆ ಎಂದು ಮೌಖಿಕವಾಗಿ ಹೇಳಿದೆ.

ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದರೋಡೆ (ಐಪಿಸಿ ಸೆಕ್ಷನ್‌ 392) ಆರೋಪಕ್ಕೆ ಸಂಬಂಧಿಸಿದಂತೆ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್‌ ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ವಿವೇಕ್‌ ನಗರದ ನಿವಾಸಿಯಾದ ತೃತೀಯ ಲಿಂಗಿ ಅಭಿಷೇಕ್‌ ಅಲಿಯಾಸ್‌ ಗೊಂಬಿ ಅಲಿಯಾಸ್‌ ಅನಾಮಿಕ ಸಲ್ಲಿಸಿದ್ದ ಮೂರು ಪ್ರತ್ಯೇಕ ಕ್ರಿಮಿನಲ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲ ಧನಂಜಯ್‌ ಕುಮಾರ್‌ ಅವರು “ಅರ್ಜಿದಾರರು ಮೂರು ಸರಗಳನ್ನು ಮೂರು ಪ್ರದೇಶಗಳಲ್ಲಿ ಕಳವು ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೂವರು ದೂರುದಾರರು ಪ್ರತ್ಯೇಕವಾಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸುವಲ್ಲಿ ಮೂರರಿಂದ ಎಂಟು ತಿಂಗಳ ಕಾಲ ವಿಳಂಬವಾಗಿದೆ. ಟಿವಿಯಲ್ಲಿ ಬಂದ ಸುದ್ದಿ ನೋಡಿದ ನಂತರ ದೂರು ದಾಖಲಿಸಿದ್ದಾರೆ” ಎಂದರು.

ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಮೊದಲ ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಲಾಗಿತ್ತು. ಆತನ ಸ್ವಹೇಳಿಕೆ ದಾಖಲಿಸಿಕೊಳ್ಳಲಾಯಿತು. ಅದರಲ್ಲಿ ಇತರೆ ಎರಡು ಸರಗಳ್ಳನ ಪ್ರಕರಣಗಳ ಬಗ್ಗೆ ಅರ್ಜಿದಾರನೇ ಹೇಳಿಕೆ ನೀಡಿದ್ದ. ತನಿಖೆ ವೇಳೆ ಕಳವು ಮಾಡಿದ್ದ ಸರಗಳನ್ನು ಜಪ್ತಿ ಮಾಡಲಾಗಿದೆ. ಈ ಮಧ್ಯೆ ಇತರೆ ಇಬ್ಬರು ದೂರುದಾರರು ದೂರು ದಾಖಲಿಸಿದ್ದಾರೆ. ಅರ್ಜಿದಾರರ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ದೋಷಾರೋಪ ಹೊರಿಸಿದೆ. ಈ ಹಂತದಲ್ಲಿ ಪ್ರಕರಣ ರದ್ದುಪಡಿಸಬಾರದು” ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ಪೀಠವು “ಅರ್ಜಿದಾರರು ವಿಚಾರಣಾ ನ್ಯಾಯಾಲಯ ವಿಚಾರಣೆ ಎದುರಿಸಲಿ” ಎಂದು ತಿಳಿಸಿ ಅರ್ಜಿಗಳನ್ನು ವಜಾಗೊಳಿಸಿತು.

ಹೆದ್ದಾರಿಯಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮತ್ತು ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸುತ್ತಿದ್ದ ಸವಾರರ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿ ಕತ್ತಿನಲ್ಲಿದ್ದ ಸರಗಳನ್ನು ಕದ್ದ ಆರೋಪ ಸಂಬಂಧ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ಅರ್ಜಿದಾರನ ವಿರುದ್ಧ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಅವುಗಳನ್ನು ಮಂಗಳೂರು 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ಮತ್ತು ಸಿಜೆಎಂ ವಿಚಾರಣೆ ನಡೆಸುತ್ತಿದೆ.

Kannada Bar & Bench
kannada.barandbench.com