ಬೆಂಗಳೂರಿನಲ್ಲಿ ಸುರಂಗ ಮಾರ್ಗ ಯೋಜನೆಯ ಟೆಂಡರ್‌ಗೆ ಮಧ್ಯಂತರ ತಡೆ ಹೈಕೋರ್ಟ್‌ ನಕಾರ

ಯೋಜನೆಯ ಕುರಿತು ಯಾವುದೇ ಪರಿಸರ ಪರಿಣಾಮ ಅಧ್ಯಯನ ನಡೆಸಿಲ್ಲ ಎಂದು ಹೇಳುತ್ತಿದ್ದೀರಿ. ಹೀಗಿರುವಾಗ, ಯಾವುದಾದರೂ ಅಧ್ಯಯನ ನಡೆಸಲಾಗಿದೆಯೇ ಎಂಬ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಲಿ. ಅದನ್ನು ಪರಿಶೀಲಿಸೋಣ ಎಂದು ಅರ್ಜಿದಾರರನ್ನು ಕುರಿತು ಪೀಠ ಹೇಳಿತು.
ಬೆಂಗಳೂರಿನಲ್ಲಿ ಸುರಂಗ ಮಾರ್ಗ ಯೋಜನೆಯ ಟೆಂಡರ್‌ಗೆ ಮಧ್ಯಂತರ ತಡೆ ಹೈಕೋರ್ಟ್‌ ನಕಾರ
Published on

ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಜೋಡಿ ಸುರಂಗ ಮಾರ್ಗ ಯೋಜನೆಯ ಟೆಂಡರ್‌ಗೆ ಮಧ್ಯಂತರ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಉದ್ದೇಶಿತ ಸುರಂಗ ಮಾರ್ಗದ ಟೆಂಡರ್ ರದ್ದು ಕೋರಿ ಇಂದಿರಾನಗರದ ಆದಿಕೇಶವುಲು ರವೀಂದ್ರ, ಜೆಪಿ ನಗರದ ವಿನೋದ್ ವ್ಯಾಸುಲು ಹಾಗೂ ಬಸವನಗುಡಿಯ ಎನ್‌ ಎಸ್‌ ಮುಕುಂದ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಾಜ್ಯ ಪರಿಸರ ಅಧ್ಯಯನ ಮೌಲ್ಯಮಾಪನ ಪ್ರಾಧಿಕಾರ, ನಗರ ಭೂ ಸಾರಿಗೆ ನಿರ್ದೇಶನಾಲಯ, ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ (ಬಿ-ಸ್ಮೈಲ್‌) ರಾಡಿಕ್ ಕನ್ಸಲ್‌ಟೆಂಟ್ಸ್‌ ಮತ್ತು ಆಲ್ಟಿನೋಕ್ ಕನ್ಸಲ್‌ಟೆಂಟ್ಸ್‌ ಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ರಾಜ್ಯ ಸರ್ಕಾರ ಯಾವುದೇ ಸಮಯದಲ್ಲಿ ಬೇಕಾದರೂ ಟೆಂಡರ್ ಅಂತಿಮಗೊಳಿಸುವ ಸಾಧ್ಯತೆ ಇದೆ. ಆದ್ದರಿಂದ, ಮಧ್ಯಂತರ ತಡೆ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಟೆಂಡರ್ ಅನ್ನು ಅವರು (ಸರ್ಕಾರ) ಅಂತಿಮಗೊಳಿಸಲಿ ಬಿಡಿ, ಸದ್ಯ ಅದರ ಬಗ್ಗೆ ಯಾವುದೇ ಪ್ರಶ್ನೆ ಇಲ್ಲವಲ್ಲ ಎಂದಿತು.

ವಿಚಾರಣೆಯ ಹಂತದಲ್ಲಿ ಪೀಠವು ಅರ್ಜಿದಾರರು ತಡವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಯೋಜನೆಯ ಬಗ್ಗೆ ಮಾಹಿತಿ ಸಿಗುವುದು ವಿಳಂಬವಾಯಿತು. ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ್ದರೂ ಹೆಚ್ಚಿನ ಮಾಹಿತಿ ದೊರೆಯಲಿಲ್ಲ ಎಂದರು. ಅಂತಿಮವಾಗಿ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಆದಷ್ಟು ಬೇಗ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು. ಆಗ ಪೀಠವು ಇದೊಂದು ದೀರ್ಘಕಾಲೀನ ಯೋಜನೆಯಾಗಿದೆ. ಯಾವುದೇ ಅವಸರ ಇಲ್ಲ. ಯೋಜನೆ ಪೂರ್ಣಗೊಳ್ಳಲು ಹಲವು ವರ್ಷಗಳ ಕಾಲ ಹಿಡಿಯುತ್ತದೆ. ನೀವು ಯೋಜನೆಯ ಕುರಿತು ಯಾವುದೇ ಪರಿಸರ ಪರಿಣಾಮ ಅಧ್ಯಯನ ನಡೆಸಿಲ್ಲ ಎಂದು ಹೇಳುತ್ತಿದ್ದೀರಿ. ಹೀಗಿರುವಾಗ, ಯಾವುದಾದರೂ ಅಧ್ಯಯನ ನಡೆಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಲಿ. ಅದನ್ನು ಪರಿಶೀಲಿಸೋಣ ಎಂದು ಹೇಳಿತು.

Kannada Bar & Bench
kannada.barandbench.com