
ಕಳವು ಚಿನ್ನಾಭರಣಗಳನ್ನು ಗಿರವಿದಾರರಲ್ಲಿ (ಫೈನಾನ್ಸ್ ಕಂಪನಿ ಅಥವಾ ಪಾನ್ ಬ್ರೋಕರ್) ಒತ್ತೆ ಇಡುವುದರಿಂದ ಎದುರಾಗಬಹುದಾದ ಪರಿಣಾಮಗಳು ಮತ್ತು ಈ ಸಂಬಂಧ ಕ್ರಿಮಿನಲ್ ಪ್ರಕ್ರಿಯೆ ಪ್ರಾರಂಭಿಸುವ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಲು ರಾಜ್ಯ ಕಾನೂನು ಆಯೋಗಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಮನವಿ ಮಾಡಿದೆ. ಅಲ್ಲದೇ, “ಕದ್ದ ಚಿನ್ನವನ್ನು ಒತ್ತೆ ಇಡುವವರ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು” ಎಂದೂ ಹೇಳಿದೆ.
ಬೇಗೂರು ಪೊಲೀಸ್ ಠಾಣಾಧಿಕಾರಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಹೊಂಗಸಂದ್ರದಲ್ಲಿರುವ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಕಂಪನಿಯ ಬೆಂಗಳೂರು ಶಾಖೆಯ ಅಧಿಕೃತ ಪ್ರತಿನಿಧಿ ಅಜುಮೋನ್ ಪಿ.ಜಾರ್ಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಚಿನ್ನವನ್ನು ಒತ್ತೆ ಇರಿಸಿಕೊಂಡು ಸಾಲ ನೀಡುವ ಗೋಲ್ಡ್ ಫೈನಾನ್ಸ್ ಕಂಪನಿಗಳು ಚಿನ್ನ ಸ್ವೀಕರಿಸುವುದಕ್ಕೂ ಮುನ್ನ ತಮ್ಮ ಕರ್ತವ್ಯಗಳನ್ನು ಸೂಕ್ತ ಮತ್ತು ಕಾನೂನುಬದ್ಧವಾಗಿ ನಿರ್ವಹಿಸಬೇಕು. ಈ ಪ್ರಕರಣದಲ್ಲಿ ಅರ್ಜಿದಾರ ಕಂಪನಿಯು ತನಿಖಾಧಿಕಾರಿಗೆ ಸಂಪೂರ್ಣ ಸಹಕಾರ ನೀಡಬೇಕು” ಎಂದು ನಿರ್ದೇಶಿಸಿ ಪೀಠವು ಅರ್ಜಿ ವಿಲೇವಾರಿ ಮಾಡಿದೆ.
“ಗ್ರಾಹಕರು ನಮ್ಮ ಬಳಿ ಒತ್ತೆ ಇರಿಸಿರುವ ಚಿನ್ನದ ಆಭರಣಗಳನ್ನು ಪೊಲೀಸರು ಬಲವಂತವಾಗಿ ವಶಪಡಿಸಿಕೊಳ್ಳುತ್ತಿದ್ದಾರೆ. ನಮ್ಮ ದೈನಂದಿನ ವ್ಯವಹಾರಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಪೊಲೀಸರ ಈ ಕ್ರಮ ಏಕಪಕ್ಷೀಯ ಮತ್ತು ಸಂವಿಧಾನದ 14 ಮತ್ತು 19 (1) (ಜಿ)ನೇ ವಿಧಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.