Cinema Theatre
Cinema Theatre

ಸಿನಿಮಾ ಟಿಕೆಟ್‌ಗೆ ₹200 ದರ ನಿಗದಿ ನಿಯಮ: ಮಧ್ಯಂತರ ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025 ಅನ್ನು ನಾಲ್ಕು ಸಂಸ್ಥೆಗಳು ಪ್ರಶ್ನಿಸಿವೆ. ಈ ಸಂಬಂಧ ಸುದೀರ್ಘ ವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ.
Published on

ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ಏಕರೂಪ ದರ ನಿಗದಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆ ನೀಡಬೇಕೆಂಬ ಮಧ್ಯಂತರ ಮನವಿ ಕುರಿತ ಆದೇಶವನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 23ಕ್ಕೆ ಕಾಯ್ದಿರಿಸಿದೆ.

ಸೆಪ್ಟೆಂಬರ್ 12ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025 ಅನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್ ಹಾಗೂ ವಿ ಕೆ ಫಿಲ್ಮ್ಸ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಒಟ್ಟುಗೂಡಿಸಿ ನ್ಯಾಯಮೂರ್ತಿ ರವಿ ಹೊಸಮನಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Ravi V Hosmani
Justice Ravi V Hosmani

ಮಲ್ಟಿಪ್ಲೆಕ್ಸ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ ಪರ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು “ಸಿನಿಮಾ ವೀಕ್ಷಕರು ಮತ್ತು ಸಿನಿಮಾ ಪ್ರದರ್ಶಕರ ಆಯ್ಕೆಯ ಹಕ್ಕಿನ ವಿಚಾರ ಇಲ್ಲಿದೆ. ಈ ಹಿಂದೆ ಸರ್ಕಾರವು ಇಂಥದ್ದೇ ಆದೇಶವನ್ನು ಹಿಂಪಡೆದಿತ್ತು. ಈಗ ಮತ್ತದೇ ಆದೇಶವನ್ನು ಹೊರಡಿಸಲಾಗಿದೆ. 2017ರಲ್ಲಿ ರಾಜ್ಯ ಸರ್ಕಾರ ಇಂಥದ್ದೇ ಆದೇಶ ಮಾಡಿತ್ತು. ಈಗ ನಿಯಮಗಳಿಗೆ ತಿದ್ದುಪಡಿ ಮಾಡಿ ಸಿನಿಮಾ ದರ ನಿಗದಿಪಡಿಸಲಾಗಿದ್ದು, ಇತಿಹಾಸ ಮರುಕಳಿಸಿದೆ” ಎಂದರು.

“ಸಿನಿಮಾ ಹಾಲ್‌ಗಳನ್ನು ರೂಪಿಸಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಇಂತಿಷ್ಟೇ ಸೀಟುಗಳಿಗೆ ಸೀಮಿತಗೊಳಿಸಿ ಅಗತ್ಯ ಸೌಲಭ್ಯಗಳೊಂದಿಗೆ ಸಿನಿಮಾ ಹಾಲ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಸರ್ಕಾರವು 200 ರೂಪಾಯಿ ಅಥವಾ ಇಂತಿಷ್ಟೇ ದರಕ್ಕೆ ಟಿಕೆಟ್‌ ಮಾರಾಟ ಮಾಡಬೇಕು ಎಂದು ಹೇಳಲಾಗದು. ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು-2025 ಅಡಿ ದರ ನಿಗದಿಯು ಕಾನೂನುಬಾಹಿರ ಕ್ರಮವಾಗಿದೆ” ಎಂದರು.

ಇತರೆ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಉದಯ್‌ ಹೊಳ್ಳ, ಧ್ಯಾನ್‌ ಚಿನ್ನಪ್ಪ ಮತ್ತು ಡಿ ಆರ್‌ ರವಿಶಂಕರ್‌ ಅವರು “ಯಾವುದೇ ದತ್ತಾಂಶ ಮತ್ತು ಕಾನೂನಿನ ನೆರವು ಇಲ್ಲದೇ ಸರ್ಕಾರವು ಟಿಕೆಟ್‌ ದರ ಮಿತಿ ಹೇರಿದೆ. ಇದು ಸ್ವೇಚ್ಛೆಯ ಕ್ರಮವಾಗಿದ್ದು, ಅರ್ಜಿದಾರರ ಹಕ್ಕನ್ನು ಕಸಿಯಲಾಗಿದೆ” ಎಂದರು.

Also Read
ರಾಜ್ಯದಲ್ಲಿ ಸಿನಿಮಾ ಟಿಕೆಟ್‌ಗೆ ₹200 ದರ ನಿಗದಿ ಪ್ರಶ್ನಿಸಿ ಹೈಕೋರ್ಟ್‌ ಕದತಟ್ಟಿದ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಇಸ್ಮಾಯಿಲ್‌ ಜಬೀವುಲ್ಲಾ ಅವರು “ಸಾರ್ವಜನಿಕರ ಹಿತದೃಷ್ಟಿಯಿಂದ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಇದನ್ನು ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಸಂವಿಧಾನದ ಅಡಿ ನಿಯಂತ್ರಣ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ. ಹೀಗಾಗಿ, ಆಕ್ಷೇಪಾರ್ಹವಾದ ಆದೇಶಕ್ಕೆ ತಡೆ ನೀಡಬಾರದು” ಎಂದರು.

ಎಲ್ಲರ ವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಕೋರಿಕೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 23ಕ್ಕೆ ಆದೇಶ ಕಾಯ್ದಿರಿಸಿತು.

Kannada Bar & Bench
kannada.barandbench.com