ಧರ್ಮಸ್ಥಳ ಪ್ರಕರಣದ ವರದಿಗಾರಿಕೆಗೆ ಮಾಧ್ಯಮಗಳಿಗೆ ನಿರ್ಬಂಧ: ಅರ್ಜಿಯ ಊರ್ಜಿತತ್ವ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಕುಡ್ಲ ರ‍್ಯಾಂಪೇಜ್‌ ಸಲ್ಲಿಸಿರುವ ಅರ್ಜಿಯ ಊರ್ಜಿತತ್ವದ ಕುರಿತ ಆದೇಶವನ್ನು ಶುಕ್ರವಾರ ಪ್ರಕಟಿಸಲು ಪ್ರಯತ್ನಿಸಲಾಗುವುದು ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿದೆ.
ಧರ್ಮಸ್ಥಳ ಪ್ರಕರಣದ ವರದಿಗಾರಿಕೆಗೆ ಮಾಧ್ಯಮಗಳಿಗೆ ನಿರ್ಬಂಧ: ಅರ್ಜಿಯ ಊರ್ಜಿತತ್ವ ಆದೇಶ ಕಾಯ್ದಿರಿಸಿದ ಹೈಕೋರ್ಟ್‌
Published on

ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ/ಪ್ರಕಟ ಮಾಡದಂತೆ ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಡಿಜಿಟಲ್‌ ಮಾಧ್ಯಮ ಸಂಸ್ಥೆ ಕುಡ್ಲ ರ‍್ಯಾಂಪೇಜ್‌ ಸಲ್ಲಿಸಿರುವ ಅರ್ಜಿಯ ಊರ್ಜಿತತ್ವದ ಕುರಿತ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ.

ಕುಡ್ಲ ರ‍್ಯಾಂಪೇಜ್‌ ಪರ ವಕೀಲ ಎ ವೇಲನ್‌ ಮತ್ತು ಹರ್ಷೇಂದ್ರ ಕುಮಾರ್ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಅವರ ವಾದ ಆಲಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಶುಕ್ರವಾರ ಆದೇಶ ಪ್ರಕಟಿಸಲು ಪ್ರಯತ್ನಿಸಲಾಗುವುದು ಎಂದು ಮೌಖಿಕವಾಗಿ ಹೇಳಿತು.

Justice M Nagaprasanna
Justice M Nagaprasanna

ಉದಯ್‌ ಹೊಳ್ಳ ಅವರು “ಸಂವಿಧಾನದ 21ನೇ ವಿಧಿಯ ಇನ್ನೊಂದು ಮುಖ ಘನತೆಯ ಹಕ್ಕಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿಯೇ ವಿಚಾರಣಾಧೀನ ನ್ಯಾಯಾಲಯವು ಮಾಧ್ಯಮಗಳನ್ನು ನಿರ್ಬಂಧಿಸಿ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ. ಮಾನಹಾನಿಯೂ ಸಾವಿಗಿಂತಲೂ ಕನಿಷ್ಠ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ವಾದಿಸಲು ತಾವು ಸಿದ್ದವಾಗಿದ್ದೇವೆ. ಯಾವುದೇ ರೀತಿಯಲ್ಲಿ ಸಮಯ ಕೇಳುವುದಿಲ್ಲ” ಎಂದರು.

ದಕ್ಷಿಣ ಕನ್ನಡದ ಕುಡ್ಲ ರ‍್ಯಾಂಪೇಜ್‌ ಪ್ರಧಾನ ಸಂಪಾದಕ ಅಜಯ್‌ ಅವರನ್ನು ಪ್ರತಿನಿಧಿಸಿದ್ದ ವಕೀಲ ಎ ವೇಲನ್‌ ಅವರು “ವಿಚಾರಣಾಧೀನ ನ್ಯಾಯಾಲಯದ ಪ್ರತಿಬಂಧಕಾದೇಶವು ವ್ಯಾಪ್ತಿ ಮೀರಿದ್ದು, ಅದು ನಿಲ್ಲುವುದಿಲ್ಲ. ನಿರಂತರವಾಗಿ ಹರ್ಷೇಂದ್ರ ಕುಮಾರ್‌ ಅವರು ಎಷ್ಟು ಪ್ರತಿಬಂಧಕಾದೇಶ ಪಡೆದುಕೊಂಡಿದ್ದಾರೆ ಎಂಬುದನ್ನು ಹೇಳಬೇಕು. ಮಾನಹಾನಿಯ ಅಂಶಗಳನ್ನು ಪರಿಶೀಲಿಸದೇ ವಿಚಾರಣಾಧೀನ ನ್ಯಾಯಾಲಯವು ಮಾಧ್ಯಮಗಳನ್ನು ನಿರ್ಬಂಧಿಸಿದೆ. 9,000 ಲಿಂಕ್‌ಗಳನ್ನು ಮೂರು ತಾಸಿನಲ್ಲಿ ಪರಿಶೀಲಿಸಿ ಪ್ರತಿಬಂಧಕಾದೇಶ ಮಾಡಲಾಗುತ್ತದೆಯೇ? ಆ ವಿಡಿಯೊಗಳಲ್ಲಿ ಮಾನಹಾನಿಯಾಗುವಂಥ ಯಾವುದೇ ಅಂಶಗಳಿಲ್ಲ. ಇಂಥ ನಿರ್ಬಂಧ ಆದೇಶಗಳನ್ನು ಮಾಡಿದರೆ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳಿಗೆ ಅಡಿಗಲ್ಲಾಗಿರುವ ತನಿಖಾ ಪತ್ರಿಕೋದ್ಯಮದ ಪ್ರಶ್ನೆ ಏನಾಗಬೇಕು? ಮಾಧ್ಯಮಗಳ ವರದಿಯನ್ನೇ ಆಧರಿಸಿ ರಾಜ್ಯ ಸರ್ಕಾರವು ಧರ್ಮಸ್ಥಳದಲ್ಲಿ ಕೊಲೆ ಮಾಡಿರುವ ಹೂತಿರುವ ಶವಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದೆ” ಎಂದರು.

Also Read
ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ಸಾರಾಸಗಟು ನಿರ್ಬಂಧದ ಬಗ್ಗೆ ಹೈಕೋರ್ಟ್‌ ಪ್ರಶ್ನೆ

ಒಂದು ಹಂತದಲ್ಲಿ ಪೀಠವು ಅರ್ಜಿದಾರರನ್ನು ಕುರಿತು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವುದೇಕೆ? ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವ ವ್ಯಕ್ತಿಯ ಅರ್ಜಿಯನ್ನು ಪರಿಗಣಿಸಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ. ಪ್ರತಿಬಂಧಕಾದೇಶ ಮಾಡಿದ ಮೇಲೂ ಒಂದರ ನಂತರ ಮತ್ತೊಂದು (ಯೂಟ್ಯೂಬ್) ಚಾನಲ್‌ ಆರಂಭಿಸುತ್ತಿರುವುದೇಕೆ ಎಂದು ಪ್ರಶ್ನಿಸಿತು.

ಅದಕ್ಕೆ ವೇಲನ್‌ ಅವರು “ಇದು ಇಬ್ಬರು ವ್ಯಕ್ತಿಗಳ ನಡುವಿನ ವಿವಾದವಲ್ಲ. ವಿಚಾರಣಾಧೀನ ನ್ಯಾಯಾಲಯದ ಪ್ರತಿಬಂಧಕಾದೇಶವು ಭಾರಿ ಪರಿಣಾಮ ಉಂಟು ಮಾಡಲಿದ್ದು, ಪ್ರತಿಯೊಂದು ಮಾಧ್ಯಮವನ್ನು ನಿರ್ಬಂಧಿಸುವ ಪರಿಣಾಮ ಹೊಂದಿದೆ” ಎಂದರು.

ಅಂತಿಮವಾಗಿ ಪೀಠವು ಅರ್ಜಿಯ ಊರ್ಜಿತತ್ವದ ಮೇಲೆ ಆದೇಶ ಕಾಯ್ದಿರಿಸಿತು.

Kannada Bar & Bench
kannada.barandbench.com