ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಕೆ ಸೋಮಶೇಖರ್‌ ನಿಧನ

ಕರ್ನಾಟಕದಲ್ಲಿ 2008ರ ಅವಧಿಯಲ್ಲಿ ನಡೆದಿದ್ದ ಚರ್ಚ್‌ಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣಾ ಆಯೋಗದ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. 
Justice B K Somashekar
Justice B K Somashekar
Published on

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ ಕೆ ಸೋಮಶೇಖರ್ ಗುರುವಾರ (ಜನವರಿ 15) ಮಧ್ಯಾಹ್ನ 3 ಗಂಟೆಗೆ ನಿಧನರಾದರು. ಅವರಿಗೆ 90 ವರ್ಷವಾಗಿತ್ತು. ನ್ಯಾ.ಸೋಮಶೇಖರ್‌ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.

ಬಾಣಾವರ ಕೃಷ್ಣಮೂರ್ತಿ ಸೋಮಶೇಖರ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದವರು. ಇವರ ತಂದೆ ಕೃಷ್ಣಮೂರ್ತಿ ದೊಡ್ಡಬಳ್ಳಾಪುರ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸರ್ಕಾರಿ ಪ್ಲೀಡರ್‌ ಆಗಿದ್ದರು.

ಬಿ ಕೆ ಸೋಮಶೇಖರ್‌ ಅವರು ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ವಿಜ್ಞಾನ ಪದವಿ ಮತ್ತು ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ (ಈಗ ವಿಶ್ವವಿದ್ಯಾಲಯ ಕಾನೂನು ಕಾಲೇಜು) ಕಾನೂನು ಪದವಿ ಪಡೆದು ಸನ್ನದು ನೋಂದಾಯಿಸಿ ವಕೀಲಿಕೆ ಆರಂಭಿಸಿದ್ದರು.

ಮುನ್ಸೀಫ್‌ 1965ರಲ್ಲಿ ಆಗಿ ಆಯ್ಕೆಗೊಂಡ ಅವರು ದೇವದುರ್ಗದಲ್ಲಿ ಮೊದಲಿಗೆ ನ್ಯಾಯಾಧೀಶರಾಗಿ ಸೇವೆ ಆರಂಭಿಸಿ ನಂತರ ಬೆಳಗಾವಿ, ಚಿತ್ರದುರ್ಗ, ಕಾರವಾರ ಸೇರಿದಂತೆ ರಾಜ್ಯದ ವಿವಿಧೆಡೆ ಕಾರ್ಯ ನಿರ್ವಹಿಸಿದರು. 1994ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು. ಕರ್ನಾಟಕ ಹೈಕೋರ್ಟ್‌ನಲ್ಲಿ ಆರು ತಿಂಗಳ ಸೇವೆ ಸಲ್ಲಿಸಿದ ನಂತರ ಅವಿಭಜಿತ ಆಂಧ್ರಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡಿದ್ದ ಅವರು 2003ರಲ್ಲಿ ಅಲ್ಲೇ ನಿವೃತ್ತಿ ಹೊಂದಿದ್ದರು.

ಕರ್ನಾಟಕದಲ್ಲಿ 2008ರ ಅವಧಿಯಲ್ಲಿ ನಡೆದಿದ್ದ ಚರ್ಚ್‌ಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣಾ ಆಯೋಗದ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. 

Kannada Bar & Bench
kannada.barandbench.com