ವೈದ್ಯಕೀಯ ಪರಿಚಾರಕ ವೀಸಾವನ್ನು ವೈದ್ಯಕೀಯ ವೀಸಾವಾಗಿ ಪರಿವರ್ತಿಸಿದ ಎಫ್‌ಆರ್‌ಆರ್‌ಒ ಕ್ರಮಕ್ಕೆ ಹೈಕೋರ್ಟ್‌ ಆಘಾತ

ಎಫ್‌ಆರ್‌ಆರ್‌ಒ ಕಚೇರಿಯ ಅಧಿಕಾರಿಗಳು ದಾಖಲೆಗಳನ್ನು ಸಹ ನೋಡದೆ ವೀಸಾ ಪರಿವರ್ತಿಸಿದ್ದಾರೆ ಎಂದು ಅಂಶ ಗೊತ್ತಾಗಲಿದ್ದು, ಈ ಬೆಳವಣಿಗೆ ಮತ್ತಷ್ಟು ಆಶ್ಚರ್ಯಕರವಾಗಿದೆ.
Karnataka HC
Karnataka HC

ವೈದ್ಯಕೀಯ ದಾಖಲೆಗಳಲ್ಲಿನ ಸತ್ಯಾಂಶ ಪರಿಶೀಲಿಸದೆ ಯೆಮೆನ್ ದೇಶದ ಪ್ರಜೆಗೆ ವೀಸಾ ಅವಧಿ ವಿಸ್ತರಿಸಿದ್ದ ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಎಫ್‌ಆರ್‌ಆರ್‌ಒ ಮೊದಲು ತನ್ನ ಮನೆ (ಕಚೇರಿ) ಸರಿಯಾದ ರೀತಿಯಲ್ಲಿಸಿರಿಸಿಕೊಳ್ಳಬೇಕು ಎಂದು ಎಚ್ಚರಿಸಿದೆ.

ವೈದ್ಯಕೀಯ ವೀಸಾ ಅವಧಿ ವಿಸ್ತರಣೆ ಮಾಡದ ಎಫ್‌ಆರ್‌ಆರ್‌ಒ ಕ್ರಮ ಪ್ರಶ್ನಿಸಿ ಯೆಮೆನ್ ದೇಶದ ಪ್ರಜೆ ಮೊಹಮ್ಮದ್ ನೋಮನ್ ಅಹ್ಮದ್ ಅಲ್ಮೇರಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ.

ಎಫ್‌ಆರ್‌ಆರ್‌ಒ ಕಚೇರಿ ಮನವಿ ಸಲ್ಲಿಸಿದ ತಕ್ಷಣ ವೀಸಾ ಅವಧಿ ವಿಸ್ತರಣೆ ಮಾಡುವುದನ್ನು ಸ್ಥಗಿತಗೊಳಿಸಬೇಕು. ವೈದ್ಯಕೀಯ ವೀಸಾ ಅಥವಾ ವೈದ್ಯಕೀಯ ಪರಿಚಾರಕ ವೀಸಾ ಕೋರಿ ಆಸ್ಪತ್ರೆಗಳು ಯಾವ ಆಧಾರದಲ್ಲಿ ಶಿಫಾರಸ್ಸು ಮಾಡುತ್ತಿವೆ ಎಂಬುದನ್ನು ಪರಿಶೀಲಿಸಬೇಕು, ಈ ಪ್ರಕ್ರಿಯೆಯಲ್ಲಿ ನಿಜವಾದ ಪ್ರಕರಣಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪೀಠ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ವೈದ್ಯಕೀಯ ಪರಿಚಾರಕ ವೀಸಾವನ್ನು ದಾಖಲೆಗಳ ಅಥವಾ ಅರ್ಜಿದಾರರ ಕಾಯಿಲೆಯನ್ನು ಪರಿಶೀಲಿಸದೆ ವೈದ್ಯಕೀಯ ವೀಸಾವಾಗಿ ಪರಿವರ್ತಿಸಿರುವ ಎಫ್‌ಆರ್‌ಆರ್‌ಒ ಕ್ರಮ ಆಘಾತಕಾರಿಯಾಗಿದೆ. ವೀಸಾ ಪರಿವರ್ತನೆಗಾಗಿ ಮ್ಯಾಕ್ಸ್ ಪಥ್ ಲ್ಯಾಬ್ಸ್‌ನ ಕ್ಲಿನಿಕಲ್ ಪ್ರಯೋಗಾಲಯ ವರದಿ ನೀಡಿದೆ. ಅದರಲ್ಲಿ ಅರ್ಜಿದಾರರು ಕೊಲೆಸ್ಟ್ರಾಲ್ ಹಾಗೂ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. ಇದೇ ಅಂಶವನ್ನು ಪರಿಗಣಿಸಿ ವೀಸಾ ಪರಿವರ್ತನೆ ಮಾಡಲಾಗಿದ್ದು, ಎಫ್‌ಆರ್‌ಆರ್‌ಒ ಕಚೇರಿಯ ಅಧಿಕಾರಿಗಳು ದಾಖಲೆಗಳನ್ನು ಸಹ ನೋಡದೆ ವೀಸಾ ಪರಿವರ್ತಿಸಿದ್ದಾರೆ ಎಂಬ ಅಂಶ ಗೊತ್ತಾಗಲಿದ್ದು, ಈ ಬೆಳವಣಿಗೆ ಮತ್ತಷ್ಟು ಆಶ್ಚರ್ಯಕರವಾಗಿದೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರು ಹರ್ನಿಯಾದ ಶಸ್ತ್ರಚಿಕಿತ್ಸೆಗಾಗಿ ಯಾವುದೇ ಆಸ್ಪತ್ರೆಗೆ ದಾಖಲಾಗಿಲ್ಲ. ಆದ್ದರಿಂದ, ಶಸ್ತ್ರಚಿಕಿತ್ಸೆ ನಡೆದೇ ಇಲ್ಲ. ಆದರೆ, ಕೋವಿಡ್ ಚಿಕಿತ್ಸೆಗಾಗಿ ಒಳರೋಗಿಯಾಗಿ ಒಂದು ವಾರ ಮಾತ್ರ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದ್ದರಿಂದ ಎಫ್‌ಆರ್‌ಆರ್‌ಒ ಕಚೇರಿ ಆಸ್ಪತ್ರೆ ನೀಡಿದ ಪ್ರಮಾಣಪತ್ರಗಳ ಸತ್ಯಾಂಶ ಪರಿಶೀಲನೆಗೊಳಪಡಿಸಬೆಕು ಎಂದು ತಿಳಿಸಿದ ಪೀಠವು ವೀಸಾಗಳ ವಿಸ್ತರಣೆ/ಪರಿವರ್ತನೆಗಾಗಿ ಆಸ್ಪತ್ರೆಗಳು ವಿದೇಶಿಯರೊಂದಿಗೆ ಕೈಜೋಡಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದೆ. ಅರ್ಜಿದಾರರ ಪರ ವಕೀಲರ ವಾದವನ್ನು ತಳ್ಳಿಹಾಕಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ನ್ಯಾಯಾಲಯದ ಪರಿಶೀಲನೆಗಾಗಿ ಮುಚ್ಚಿದ ಲಕೋಟೆಯಲ್ಲಿ ಅರ್ಜಿದಾರರ ಕುರಿತು ಮಾಹಿತಿ ನೀಡಿದ್ದರು. ಇದನ್ನು ಪರಿಶೀಲಿಸಿದಾಗ ಅರ್ಜಿದಾರ ಅಲ್ಮೇರಿ, ಟ್ರಸ್ಟ್‌ವೆಲ್ ಆಸ್ಪತ್ರೆ ನೀಡಿ ಪತ್ರದ ಆಧಾರದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕೆ ಎಂಬುದಾಗಿ ತಿಳಿಸಿ ಹಲವು ಯೆಮೆನ್ ಪ್ರಜೆಗಳನ್ನು ಭಾರತಕ್ಕೆ ಕರೆ ತರುವ ಉದ್ಯೋಗ ಕೊಡಿಸುವ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಅಂಶ ಬಹಿರಂಗವಾಗಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಯೆಮೆನ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಗಮನಿಸಬೇಕಾಗಿದೆ. ಅರ್ಜಿಯನ್ನು ಅರ್ಹತೆಯ ಮೇರೆಗೆ ಪರಿಗಣಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದರು.

ಪ್ರಕರಣದ ಹಿನ್ನೆಲೆ: 1974ರಲ್ಲಿ ಯೆಮೆನ್‌ನಲ್ಲಿ ಜನಿಸಿದ ಅಲ್ಮೇರಿ ಅವರು ತನ್ನ ದೇಶದಲ್ಲಿ ವಿವಾಹವಾಗಿದ್ದು, ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. 2013ರಲ್ಲಿ ಮಾಸ್ಟರ್ ಆಫ್ ಸೈನ್ಸ್‌ನಲ್ಲಿ 3 ವರ್ಷಗಳ ಕೋರ್ಸ್ ಪಡೆಯುವುದಕ್ಕಾಗಿ ಭಾರತಕ್ಕೆ ಬಂದಿದ್ದ ಅವರು, ಟಿ ಜಾನ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಪ್ರವೇಶ ಪಡೆದುಕೊಂಡಿದ್ದರು. ಇದಕ್ಕಾಗಿ ಅವರಿಗೆ 2013ರ ಆಗಸ್ಟ್ 7ರಿಂದ 2014ರ ಆಗಸ್ಟ್ 6 ರವರೆಗೆ ವಿದ್ಯಾರ್ಥಿ ವೀಸಾ ಮಂಜೂರು ಮಾಡಿದ್ದರು. ಭಾಷೆಯ ತೊಂದರೆ ಮತ್ತು ಅನಾರೋಗ್ಯದ ಪರಿಣಾಮ ಶಿಕ್ಷಣ ಮುಂದುವರೆಸಲಾಗಿರಲಿಲ್ಲ. ಪರಿಣಾಮ 2016ರ ಮೇ 28ರಂದು ಯೆಮನ್‌ಗೆ ಹಿಂದಿರುಗಿದ್ದರು.

ಇದಾದ ಬಳಿಕ ತಮ್ಮ ಮುಂದಿನ ಅಧ್ಯಯನ ಮತ್ತು ಪದವಿ ಕೋರ್ಸ್‌ಗೆ ಮರು ಪ್ರವೇಶಕ್ಕೆ 2016ರ ಅಕ್ಟೋಬರ್ 14ರಂದು ಸಂದರ್ಶಕರ ವೀಸಾದಲ್ಲಿ ಭಾರತಕ್ಕೆ ಮರಳಿದರು.  ಭಾರತಕ್ಕೆ ಬಂದ ಬಳಿಕ ಆರೋಗ್ಯವು ಮತ್ತೆ ಹದಗೆಟ್ಟಿತು. ಹೀಗಾಗಿ ಅವರು ಸಂದರ್ಶಕ ವೀಸಾವನ್ನು ವೈದ್ಯಕೀಯ ವೀಸಾವಾಗಿ ಪರಿವರ್ತಿಸಿದರು. ವೀಸಾದ ಅವಧಿ 2023ರ ಜೂನ್ 5ಕ್ಕೆ ಕೊನೆಗೊಂಡಿತು.

ನಂತರ ಅವರು ಎಫ್‌ಆರ್‌ಆರ್‌ಒಗೆ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಿದರು. ವಿಸ್ತರಣೆಯ ಪರಿಗಣನೆ ಬಾಕಿ ಇರುವಾಗ, ಅವರು ಶೆನಾಜ್ ಖಾನುಮ್ ಎಂಬ ಭಾರತೀಯರೊಬ್ಬರನ್ನು ವಿವಾಹವಾಗಿದ್ದರು. ಇದರ ಆಧಾರದಲ್ಲಿ ಏಳು ವರ್ಷಕ್ಕಿಂತ ಹೆಚ್ಚುಕಾಲ ಭಾರತದಲ್ಲಿ ನೆಲೆಸಿದ್ದೇನೆ. ಭಾರತೀಯ ಪ್ರಜೆಯನ್ನು ಮದುವೆಯಾಗಿದ್ದು, ಭಾರತೀಯ ಪೌರತ್ವ ನೀಡಬೇಕು ಎಂದು ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು 2021ರ ಆಗಸ್ಟ್ 14ರಂದು ವಜಾಗೊಳಿಸಲಾಗಿತ್ತು. ಈ ನಡುವೆ ವೀಸಾ ವಿಸ್ತರಣೆಗೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅಲ್ಮೇರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Attachment
PDF
Mohammed Noman Ahmed Almeri Vs Union of India.pdf
Preview
Kannada Bar & Bench
kannada.barandbench.com