ಪತಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಆಗಿಲ್ಲ ಎಂದು ಹೆರಿಗೆ ಭತ್ಯೆ ತಡೆದಿದ್ದ ಕೆಪಿಟಿಸಿಎಲ್‌ಗೆ ಹೈಕೋರ್ಟ್‌ ತರಾಟೆ

ಅರ್ಜಿದಾರರು ಬೆಸ್ಕಾಂನ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ಗೆ ಮನವಿ ಸಲ್ಲಿಸಿ, 90 ದಿನಗಳ ಭತ್ಯೆ ಪಾವತಿಸುವಂತೆ ಕೋರಬಹುದು. ಮನವಿ ಸಲ್ಲಿಸಿದರೆ, ಪರಿಶೀಲಿಸಿ ಭತ್ಯೆಯನ್ನು ಶೇ.8ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಿದೆ.
Karnataka High Court
Karnataka High Court

ಪತಿ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿಲ್ಲ ಎಂದು ತನ್ನಲ್ಲಿ ಉದ್ಯೋಗಿಯಾಗಿದ್ದ ಪತ್ನಿಯ 90 ದಿನಗಳ ಹೆರಿಗೆ ಭತ್ಯೆಯನ್ನು ಕಾನೂನುಬಾಹಿರವಾಗಿ ತಡೆ ಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕ್ರಮಕ್ಕೆ ಈಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಅಷ್ಟು ದಿನಗಳ ಭತ್ಯೆಯನ್ನು ಶೇ.8 ಬಡ್ಡಿಯೊಂದಿಗೆ ಪಾವತಿಸಲು ನಿರ್ದೇಶಿಸಿದೆ.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ ಕ್ರಮವನ್ನು ಪ್ರಶ್ನಿಸಿ 71 ವರ್ಷದ ನಿವೃತ್ತ ನೌಕರರಾಗಿರುವ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ. ಅಲ್ಲದೆ ಮಹಿಳಾ ಉದ್ಯೋಗಿಯು ನಿವೃತ್ತರಾದ 2013ರ ಮೇ 1ರಿಂದ ಅನ್ವಯವಾಗುವಂತೆ 90 ದಿನಗಳ ಭತ್ಯೆಯನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡಲು ಆದೇಶಿಸಿದೆ.

ಅರ್ಜಿದಾರರು ಬೆಸ್ಕಾಂನ ಸೂಪರಿಟಿಂಡೆಂಟ್‌ ಎಂಜಿನಿಯರ್‌ಗೆ ಹೊಸದಾಗಿ ಮನವಿ ಸಲ್ಲಿಸಿ, 90 ದಿನಗಳ ಭತ್ಯೆಯನ್ನು ಪಾವತಿಸುವಂತೆ ಕೋರಬಹುದು. ಅರ್ಜಿದಾರರು ಮನವಿ ಸಲ್ಲಿಸಿದರೆ, ಸಂಬಂಧಪಟ್ಟ ಪ್ರಾಧಿಕಾರ ಆದೇಶ ಪರಿಶೀಲಿಸಿ ಭತ್ಯೆಯನ್ನು ಶೇ.8ರ ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ಆದೇಶಿಸಿದೆ.

ಸರ್ಕಾರಿ ನೌಕರರಾಗಿರುವವರಿಗೆ ಪತಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಗತ್ಯವನ್ನು ಪರಿಚಯಿಸುವ ಹಿಂದಿನ ಉದ್ದೇಶವು ಮಕ್ಕಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುವುದಾಗಿತ್ತು. ಆದರೆ, ರಜೆ ಮಂಜೂರಾದ 30 ವರ್ಷಗಳ ಬಳಿಕ ಪತಿ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂಬ ಕಾರಣ ನೀಡಿ, ನಿಯಮಗಳ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಕಾನೂನು ಬಾಹಿರವಾಗಿ ರಜೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.

ಪ್ರಾರಂಭದಲ್ಲಿ ಹೆರಿಗೆ ರಜೆ ಮಂಜೂರು ಮಾಡುವುದಕ್ಕೆ ಪತ್ನಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ನಿಯಮವಿತ್ತು. ಬಳಿಕ ಪತಿಯೂ ಸಂತಾನಶಕ್ತಿ ಹರಣಕ್ಕೆ ಒಳಗಾಗಬೇಕು ಎಂಬುದಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರೆಯು ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದು, ಬೆಂಗಳೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಹಿರಿಯ ಸಹಾಯಕಿಯಾಗಿ ನಿವೃತ್ತರಾಗಿದ್ದರು.

ಕರ್ನಾಟಕ ಸಿವಿಲ್ ಕಾಯಿದೆ 1983ರ ನಿಯಮ 130ರ ಅಡಿಯಲ್ಲಿ ಅರ್ಜಿದಾರರಿಗೆ 90 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಲಾಗಿತ್ತು. ಈ ರಜೆ ದಿನಗಳಿಗೆ ವೇತನ ಪಾವತಿ ಮಾಡಬೇಕಾದಲ್ಲಿ ಮೂರಕ್ಕಿಂತ ಹೆಚ್ಚಿನ ಮಕ್ಕಳಿರುವವರು ಕಡ್ಡಾಯವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದು ಹೇಳಲಾಗಿತ್ತು. ಬಳಿಕ ಸರ್ಕಾರಿ ಮಹಿಳಾ ಉದ್ಯೋಗಿಯ ಪತಿಯೂ ಪರ್ಯಾಯವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿತ್ತು.

ಅರ್ಜಿದಾರರು ನಿವೃತ್ತರಾದ ಬಳಿಕ ರಜೆ ಪಡೆದುಕೊಂಡಿದ್ದಕ್ಕೆ ಪರಿಹಾರವಾಗಿ ರಜೆಯ ನಗದೀಕರಣ ಸೇರಿದಂತೆ ನಿವೃತ್ತಿಯ ಸೌಲಭ್ಯಗಳನ್ನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ನಿಗಮವು, ನಿಯಮ 130ರನ್ನು ಉಲ್ಲೇಖಿಸಿ ಅದರಂತೆ ರಜೆ ದಿನಗಳ ವೇತನ ನಗದೀಕರಣ ಮಾಡಿಕೊಳ್ಳಬೇಕಾದರೆ ಅರ್ಜಿದಾರರ ಪತಿಯೂ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂಬ ತಾಂತ್ರಿಕ ಕಾರಣ ನೀಡಿ ರಜೆ ಪಡೆದಿದ್ದ ದಿನಗಳ ವೇತನ ನಗದೀಕರಣ ಮಾಡಿಕೊಡುವುದಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರೆ ಹೈಕೋರ್ಟ್ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com