ʼಗೃಹ ಜ್ಯೋತಿʼ ಅಪಪ್ರಚಾರಕ್ಕೆ ನಕಲಿ ವಿಡಿಯೊ ಬಳಕೆ: ತೆಲಂಗಾಣದ ʼಫ್ಯಾಕ್ಟ್‌ ಚೆಕರ್ʼ ವಿರುದ್ದದ ಪ್ರಕರಣಕ್ಕೆ ತಡೆ

“ಗೃಹ ಜ್ಯೋತಿ ಬಗ್ಗೆ ಸುಳ್ಳು ಸುದ್ದಿ ಬಿತ್ತುವ ಕೆಲಸವನ್ನು ಅರ್ಜಿದಾರ ಮಾಡಿದ್ದಾರೆ. ಕರ್ನಾಟಕದಲ್ಲಿ ವಿದ್ಯುತ್‌ ಕೊರತೆಯಿದ್ದು, ತೆಲಂಗಾಣದಿಂದ ವಿದ್ಯುತ್‌ ಪಡೆಯಲು ಯತ್ನಿಸುತ್ತಿದ್ದಾರೆ ಎಂಬರ್ಥದ ವಿಡಿಯೊ ಹಂಚಲಾಗಿದೆ” ಎಂದ ಬೆಸ್ಕಾಂ ವಕೀಲೆ.
ʼಗೃಹ ಜ್ಯೋತಿʼ ಅಪಪ್ರಚಾರಕ್ಕೆ ನಕಲಿ ವಿಡಿಯೊ ಬಳಕೆ: ತೆಲಂಗಾಣದ ʼಫ್ಯಾಕ್ಟ್‌ ಚೆಕರ್ʼ ವಿರುದ್ದದ ಪ್ರಕರಣಕ್ಕೆ ತಡೆ
Published on

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ಬಗ್ಗೆ ಅಪಪ್ರಚಾರ ಮಾಡಲು ಇಂಧನ ಸಚಿವ ಕೆ ಜೆ ಜಾರ್ಜ್‌ ಅವರನ್ನು ಒಳಗೊಂಡು ನಕಲಿ ವಿಡಿಯೊ ಸೃಷ್ಟಿಸಿ, ಬಿತ್ತರಿಸಿದ ಆರೋಪದ ಸಂಬಂಧ ತೆಲಂಗಾಣದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ತಡೆ ನೀಡಿದೆ.

ಬೆಂಗಳೂರಿನ ಪೂರ್ವ ಸೆನ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ನಂತರದ ಕಾನೂನು ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ತೆಲಂಗಾಣದ ಕರೀಂನಗರದ ರವಿಕಾಂತ್‌ ಸಾಮ್ರಾಟ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಕೆ ಎಸ್‌ ಸುಮನ್‌ ಅವರು “ಅರ್ಜಿದಾರರು 28.11.2023ರಂದು ತೆಲಂಗಾಣದಿಂದ ಹೆಚ್ಚುವರಿ ವಿದ್ಯುತ್‌ ಖರೀದಿಸುವ ಕುರಿತು ಸಚಿವ ಜಾರ್ಜ್‌ ಚರ್ಚೆ ನಡೆಸುತ್ತಿರುವ ಸಂಬಂಧಿತ ವಿಡಿಯೊವನ್ನು ರಿಪೋಸ್ಟ್‌ ಮಾಡಿದ್ದರು. ಒಳ್ಳೆಯ ಉದ್ದೇಶದಿಂದ ಆ ವಿಡಿಯೊ ರಿಪೋಸ್ಟ್‌ ಮಾಡಲಾಗಿತ್ತು. ಇದು ಸುಳ್ಳು ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಅರ್ಧ ದಿನದಲ್ಲೇ ಟ್ವೀಟ್‌ ಅಳಿಸಿ ಹಾಕಲಾಗಿದೆ” ಎಂದರು.

ಬೆಸ್ಕಾಂ ಪ್ರಧಾನ ವ್ಯಪಸ್ಥಾಪಕರನ್ನು ಪ್ರತಿನಿಧಿಸಿದ್ದ ವಕೀಲೆ ಜಿ ಕೆ ಭಾವನಾ ಅವರು “ಅರ್ಜಿದಾರರು ಗೃಹ ಜ್ಯೋತಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಬಿತ್ತುವ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ವಿದ್ಯುತ್‌ ಕೊರತೆಯಿದ್ದು, ತೆಲಂಗಾಣದಿಂದ ವಿದ್ಯುತ್‌ ಪಡೆಯಲು ಯತ್ನಿಸುತ್ತಿದ್ದಾರೆ ಎಂಬರ್ಥದ ವಿಡಿಯೊ ಅದಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಅದು ಸಾಬೀತಾಗಿದೆ. ಅರ್ಜಿದಾರರು ಸಾಮಾಜಿಕ ಮಾಧ್ಯಮದಲ್ಲಿ ಫ್ಯಾಕ್ಟ್‌ ಚೆಕರ್‌ ಅಂತೆ. ಅದು ಅವರ ಉದ್ಯೋಗ” ಎಂದರು.

ಇದಕ್ಕೆ ಪೀಠವು “ಇದೇನಿದು ಸಾಮಾಜಿಕ ಮಾಧ್ಯಮ ಫ್ಯಾಕ್ಟ್‌ ಚೆಕರ್‌ ಹುದ್ದೆ. ಇದನ್ನು ನಿಮಗೆ ನೀಡಿದವರು ಯಾರು? ಪೊಲೀಸರಿಗೆ ತನಿಖೆ ಮಾಡಲು ಆದೇಶಿಸಲಾಗುವುದು” ಎಂದಿತು.

ಇದಕ್ಕೆ ಸುಮನ್‌ ಅವರು “ಅರ್ಜಿದಾರರು ಜಾಹೀರಾತು ಕಂಪನಿಗೆ ಕೆಲಸ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಾರೆ” ಎಂದು ಸಮಜಾಯಿಷಿ ನೀಡಿದರು.

ಉಭಯ ಪಕ್ಷಕಾರರ ವಾದ ಆಲಿಸಿದ ನ್ಯಾಯಾಲಯವು ವಾಸ್ತವಿಕ ವಿಚಾರ ತಿಳಿದ ತಕ್ಷಣ ಅರ್ಜಿದಾರ ತನ್ನ ಖಾತೆಯಿಂದ ರಿಪೋಸ್ಟ್‌ ಮಾಡಿದ್ದ ಟ್ವೀಟ್‌ ಅನ್ನು ತೆರವು ಮಾಡಿದ್ದಾರೆ. ಇದನ್ನು ಆಧರಿಸಿ ಮುಂದಿನ ವಿಚಾರಣೆವರೆಗೆ ಅವರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲಾಗಿದೆ ಎಂದು ಆದೇಶಿಸಿತು.

ಪ್ರಕರಣದ ಹಿನ್ನೆಲೆ: ತೆಲಂಗಾಣ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಗೃಹ ಜ್ಯೋತಿ ಯೋಜನೆಯನ್ನು ಟೀಕಿಸುವ ಇಂಧನ ಸಚಿವ ಕೆ ಜೆ ಜಾರ್ಜ್‌ ಮತ್ತು ಬೆಸ್ಕಾಂ ಅಧಿಕಾರಿ ಈ ಕುರಿತು ಚರ್ಚಿಸುವ ತಿರುಚಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಗೃಹ ಜ್ಯೋತಿ ಯೋಜನೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್‌ ಅಭಾವ ಸೃಷ್ಟಿಯಾಗಿದೆ ಎಂಬ ಭಾವನೆಯನ್ನು ತಿರುಚಿದ ವಿಡಿಯೊ ನೀಡುತ್ತದೆ ಎಂದು ಆರೋಪಿಸಿ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ ಸಿ ಎನ್‌ ಮಂಜುನಾಥ್‌ ದೂರಿದ್ದರು. ಇದನ್ನು ಆಧರಿಸಿ ಬೆಂಗಳೂರಿನ ಪೂರ್ವ ಸೆನ್‌ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66 ಮತ್ತು 66(C) ಹಾಗೂ ಐಪಿಸಿ ಸೆಕ್ಷನ್‌ಗಳಾದ 507 ಮತ್ತು 153ರ ಅಡಿ ಪ್ರಕರಣ ದಾಖಲಿಸಿದ್ದರು.

Kannada Bar & Bench
kannada.barandbench.com