
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನ ಔಷಧಿ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಇತ್ತಿಚೆಗಷ್ಟೇ 18 ಜನೌಷಧಿ ಕೇಂದ್ರಗಳ ಮಾಲೀಕರಿಗೆ ಸೀಮಿತವಾಗಿ ತಡೆ ಸಿಕ್ಕಿದ್ದ ಬೆನ್ನಲ್ಲೇ ಬುಧವಾರ ಮತ್ತೆ 5 ಜನ ಔಷಧಿ ಕೇಂದ್ರಗಳ ಮಾಲೀಕರಿಗೆ ಸೀಮಿತವಾಗಿ ರಾಜ್ಯ ಸರ್ಕಾರದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರದ ತ್ಯಾಮಗೊಂಡ್ಲು ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಜನ ಔಷಧಿ ಕೇಂದ್ರದ ಮಾಲೀಕ ಟಿ ಎನ್ ಪ್ರದೀಪ್ ಸೇರಿ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ, ಸುಳ್ಯ ತಾಲೂಕು ಆಸ್ಪತ್ರೆ, ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಸಮುದಾಯ ಆರೋಗ್ಯ ಕೇಂದ್ರ, ಚಿಕ್ಕಮಗಳೂರು ಜಿಲ್ಲೆ ಕಡೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಜನ ಔಷಧಿ ಕೇಂದ್ರಗಳ ಮಾಲೀಕರು ಪ್ರತ್ಯೇಕವಾಗಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಅನಿರುದ್ಧ ಕುಲಕರ್ಣಿ ಅವರು “ಜನ ಔಷಧಿ ಕೇಂದ್ರ ತೆರೆಯಲು ಮೂಲಸೌಕರ್ಯ ಕಲ್ಪಿಸಲು ಸಾಕಷ್ಟು ವೆಚ್ಚ ಮಾಡಲಾಗಿದೆ. ಜನರಿಗೆ ಶೇ.50ರಿಂದ 90ರಷ್ಟು ರಿಯಾಯಿತಿ ದರದಲ್ಲಿ ಔಷಧಗಳನ್ನು ನೀಡಲಾಗುತ್ತಿದೆ. ಸರ್ಕಾರದ ಆದೇಶದಿಂದ ಅರ್ಜಿದಾರರ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ” ಎಂದು ವಾದಿಸಿದರು.
ಈ ವಾದವನ್ನು ಪರಿಗಣಿಸಿರುವ ಪೀಠವು ಅರ್ಜಿದಾರರು ಹೊಂದಿರುವ ಜನ ಔಷದಿ ಕೇಂದ್ರಗಳನ್ನು ಮುಂದಿನ ವಿಚಾರಣೆವರೆಗೆ ಸ್ಥಗಿತಗೊಳಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಬೀದರ್, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿಯ ಅರ್ಜಿದಾರರು ಜನ ಔಷಧಿ ಕೇಂದ್ರಗಳಿಗೆ ನೀಡಿರುವ ಅನುಮತಿ ಹಿಂಪಡೆದರೆ ತಮ್ಮ ಜೀವನೋಪಾಯ ಹಕ್ಕಿಗೆ ಧಕ್ಕೆಯಾಗುತ್ತದೆ. ಈ ಕೇಂದ್ರಗಳನ್ನು ಆರಂಭಿಸಲು ಮೌಲಸೌಕರ್ಯ, ಔಷಧಿ ಮತ್ತು ಪರವಾನಗಿ ಪಡೆಯಲು ಸಾಕಷ್ಟು ವೆಚ್ಚ ಮಾಡಲಾಗಿದೆ. ಹೀಗಾಗಿ, ಮೇ 14ರ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದರು. ಇದರ ಭಾಗವಾಗಿ ಕಲಬುರ್ಗಿ ಪೀಠದ ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠವು ಮಂಗಳವಾರ ತಡೆ ನೀಡಿತ್ತು.