ನಗರಾಭಿವೃದ್ಧಿ ಇಲಾಖೆಯ ಘನತ್ಯಾಜ್ಯ ವಿಲೇವಾರಿ ಮರು ಟೆಂಡರ್‌ ಆದೇಶಕ್ಕೆ ಹೈಕೋರ್ಟ್ ತಡೆ

“ಮರು ಟೆಂಡರ್ ಅಧಿಸೂಚನೆಯಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆ ಪಡೆದು ಇಲಾಖಾ ಸಚಿವರ ಅನುಮೋದನೆಯೊಂದಿಗೆ ತುರ್ತಾಗಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಇದು ಕೆಟಿಪಿಪಿ ಕಾಯಿದೆಗೆ ತದ್ವಿರುದ್ಧ ನಡೆ” ಎಂದ ಅರ್ಜಿದಾರರ ಪರ ವಕೀಲರು.
BBMP and Karnataka HC
BBMP and Karnataka HC
Published on

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಮರು ಟೆಂಡರ್‌ಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ.

ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಸಂಘ ಹಾಗೂ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಎಸ್ ಎನ್ ಬಾಲಸುಬ್ರಮಣಿಯನ್ ಅವರು ಮರು ಟೆಂಡರ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “2024ರ ನವೆಂಬರ್‌ನಲ್ಲಿ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತ (ಬಿಎಸ್‌ಡಬ್ಲೂಎಂಎಲ್‌) ಹೊರಡಿಸಿದ್ದ ಟೆಂಡರ್‌ ನಿಯಮಗಳನ್ನು ಪ್ರಶ್ನಿಸಿ ಹಲವು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳನ್ನು ಇದೇ ಪೀಠ ಇತ್ತೀಚೆಗಷ್ಟೇ ವಿಲೇವಾರಿ ಮಾಡಿತ್ತು. ಅಂತೆಯೇ, ನಾಲ್ಕು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಆದೇಶಿಸಿತ್ತು" ಎಂದರು.

"ಈ ಆದೇಶಕ್ಕೆ ವ್ಯತಿರಿಕ್ತವಾಗಿ 2025ರ ಮೇ 26ರಂದು ಮತ್ತೊಮ್ಮೆ ಮರು ಟೆಂಡರ್ ಕರೆಯಲಾಗಿದೆ. ಈ ಮರು ಟೆಂಡರ್ ಅಧಿಸೂಚನೆಯಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮೋದನೆ ಪಡೆದು ಇಲಾಖಾ ಸಚಿವರ ಅನುಮೋದನೆಯೊಂದಿಗೆ ತುರ್ತಾಗಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಇದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯಿದೆ-1999ಕ್ಕೆ ಸಂಪೂರ್ಣ ತದ್ವಿರುದ್ಧ" ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಲ್ಲದೆ, "ಇದೇ ಪೀಠ ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಂಡಿದೆ ಮತ್ತು  ತೀರ್ಪು ನೀಡುವ ಮುನ್ನ ನ್ಯಾಯಾಲಯ ತಾನು ನೀಡಿದ್ದ ಮುಚ್ಚಳಿಕೆಯನ್ನು ಸರ್ಕಾರ ಸ್ಪಷ್ಟವಾಗಿ ಉಲ್ಲಂಘಿಸಿದೆ” ಎಂದರು.

ಇದಕ್ಕೆ ಆಘಾತ ವ್ಯಕ್ತಪಡಿಸಿದ ಪೀಠವು “ಇಲಾಖೆ ಸಚಿವರು ಹೇಗೆ ಬಂದರು” ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸುವ ಮೂಲಕ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ಇದಕ್ಕೆ ಸರ್ಕಾರದ ಪರ ವಕೀಲ ಸ್ಫೂರ್ತಿ ಹೆಗಡೆ ಅವರು “ಈ ಪ್ರಕರಣದಲ್ಲಿ ಅಡ್ವೊಕೇಟ್ ಜನರಲ್ ಬಂದು ವಾದಿಸಲಿದ್ದಾರೆ. ಅದಕ್ಕಾಗಿ ಒಂದಷ್ಟು ಕಾಲವಕಾಶ ನೀಡಬೇಕು” ಎಂದು ಕೋರಿದರು.

ಇದನ್ನು ಪರಿಗಣಿಸಿದ ಪೀಠವು ಅರ್ಜಿದಾರರ ಮಧ್ಯಂತರ ಮನವಿ ಪುರಸ್ಕರಿಸಿ ಹೊಸ ಟೆಂಡರ್‌ಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು. ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ತ್ಯಾಜ್ಯ ಮತ್ತು ರಸ್ತೆ ಗುಡಿಸುವಿಕೆ ತ್ಯಾಜ್ಯದ ಸಂಗ್ರಹಣೆ, ಪ್ರಾಥಮಿಕ ಸಾಗಣೆ ಹಾಗೂ ದ್ವಿತೀಯ ಹಂತದ ಸಾಗಣೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು ಮರು ಟೆಂಡರ್ ಗೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿತ್ತು.

Kannada Bar & Bench
kannada.barandbench.com