ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಏಕರೂಪವಾಗಿರಲಿ ಮತ್ತು ಅವರ ನಿವೃತ್ತಿ ವಯೋಮಿತಿ ಹೆಚ್ಚಳವಾಗಲಿ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ತಿಳಿಸಿದ್ದಾರೆ. ಆ ಮೂಲಕ ತಮ್ಮ 28 ವರ್ಷದ ಹಿಂದಿನ ಸಲಹೆಯನ್ನು ಪುನರುಚ್ಚರಿಸಿದ್ದಾರೆ.
ಈಸ್ಟರ್ನ್ ಬುಕ್ ಕಂಪೆನಿ ಶನಿವಾರ ಆಯೋಜಿಸಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ವಿರಚಿತ ʼಅನಾಮಲೀಸ್ ಇನ್ ಲಾ & ಜಸ್ಟೀಸ್: ರೈಟಿಂಗ್ಸ್ ರಿಲೇಟೆಡ್ ಟು ಲಾ ಅಂಡ್ ಜಸ್ಟೀಸ್ʼ ಕೃತಿಯ ಬಿಡುಗಡೆ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಎಲ್ಲಾ ನ್ಯಾಯಮೂರ್ತಿಗಳು ಒಂದೇ ವಯಸ್ಸಿನಲ್ಲಿ ನಿವೃತ್ತರಾಗಬೇಕು, 62 ಅಥವಾ 65ನೇ ವಯಸ್ಸಿನಲ್ಲಿ ಅಲ್ಲ ಬದಲಿಗೆ 68 ನೇ ವಯಸ್ಸಿನಲ್ಲಿ!” ಎಂದು ಅವರು ಹೇಳಿದರು. , 1993ರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದಲ್ಲಿ ತಾವು ಇದೇ ರೀತಿಯ ಸಲಹೆ ನೀಡಿದ್ದಾಗಿ ಸ್ಮರಿಸಿದರು. ಅಲ್ಲದೆ “ನ್ಯಾಯಮೂರ್ತಿಗಳು 62ನೇ ವರ್ಷದಲ್ಲಿ ಏಕೆ ನಿವೃತ್ತರಾಗಬೇಕು? ಭಾರತದಲ್ಲಿ ಮನುಷ್ಯನ ಸರಾಸರಿ ಜೀವಿತಾವಧಿ ಸ್ವಾತಂತ್ರ್ಯ ಬಂದ ಅವಧಿಯಲ್ಲಿ 27 ವರ್ಷ ಇತ್ತು, ಈಗ ಅದು 67 ವರ್ಷಕ್ಕೆ ಏರಿಕೆಯಾಗಿದೆ" ಎಂದರು. ಈಗ ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ 62 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಿದ್ದರೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷ ಆಗಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಕೃತಿ ಬಿಡುಗಡೆಗೊಳಿಸಿದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್ ಸಿ ಲಹೋಟಿ, ನಿವೃತ್ತ ನ್ಯಾಯಮೂರ್ತಿಗಳಾದ ಬಿ ಎನ್ ಕೃಷ್ಣ, ಕೃತಿಕಾರ ನ್ಯಾ. ಆರ್ ವಿ ರವೀಂದ್ರನ್ ಚರ್ಚೆಯಲ್ಲಿ ಪಾಲ್ಗೊಂಡರು. ಹಿರಿಯ ನ್ಯಾಯವಾದಿ ಅರವಿಂದ್ ಪಿ ದಾತಾರ್ ಕಾರ್ಯಕ್ರಮ ನಡೆಸಿಕೊಟ್ಟರು.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸಿನ ವಿವಾದದ ಜೊತೆಗೆ ಪ್ರಕರಣಗಳ ವಿಲೇವಾರಿಯಲ್ಲಾಗುತ್ತಿರುವ ವಿಳಂಬದ ಕುರಿತೂ ಚರ್ಚೆ ನಡೆಯಿತು. ಪ್ರಕರಣಗಳು ಬಾಕಿ ಉಳಿಯುವುದನ್ನು ತಪ್ಪಿಸಲು ಸಂವಿಧಾನದ 224 ಎ ವಿಧಿಯಡಿ ಹೆಚ್ಚುವರಿ ನ್ಯಾಯಾಧೀಶರನ್ನು ನೇಮಕ ಮಾಡುವ ಕುರಿತಾದ ಇತ್ತೀಚಿನ ಪ್ರಕರಣವನ್ನು ದಾತಾರ್ ಪ್ರಸ್ತಾಪಿಸಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾ. ಲಹೋಟಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಬ್ಬರಿಗೂ ಏಕರೂಪದ ನಿವೃತ್ತಿ ವಯಸ್ಸು ಘೋಷಿಸಬೇಕು. “ಇದರಿಂದ ಅನಗತ್ಯ ಸ್ಪರ್ಧೆ ತಪ್ಪಿ ದಿನೇ ದಿನೇ ಕಳೆದುಹೋಗುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ಘನತೆ ಮರಳಿ ದೊರೆಯುತ್ತದೆ” ಎಂದರು.
ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ಅವರು ಏಕರೂಪದ ನಿವೃತ್ತಿ ವಯಸ್ಸು ನಿಗದಿಪಡಿಸುವುದರಿಂದ ಈಗ ಇರುವ ಅನೀತಿ ದೂರವಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಸ್ವಾತಂತ್ರ್ಯದ ಮನೋಭಾವ ಮೂಡುತ್ತದೆ ಎಂಬುದಾಗಿ ತಿಳಿಸಿದರು.
ನ್ಯಾ. ರವೀಂದ್ರನ್ ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡರು. ಆದರೆ ನಿವೃತ್ತಿ ವಯಸ್ಸು ಹೆಚ್ಚಳ ಮಾಡುವುದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮಾತ್ರ ಸೀಮಿತವಾಗಬಾರದು ಬದಲಿಗೆ ಅಧೀನ ನ್ಯಾಯಾಲಯಗಳಿಗೂ ವಿಸ್ತರಿಸಬೇಕು ಎಂದು ಸಲಹೆ ನೀಡಿದರು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನೀಡಿದಂತೆ ಅಲ್ಲದಿದ್ದರೂ ಅವರ ನಿವೃತ್ತಿ ವಯೋಮಿತಿಯನ್ನು 62 ವರ್ಷಗಳಿಗೆ ಸಲೀಸಾಗಿ ಹೆಚ್ಚಿಸಬಹುದು ಎಂದರು.