

ಗುರುತರ ಕ್ರಿಮಿನಲ್ ಪ್ರಕರಣಗಳಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 231ರ ಉಪ ಸೆಕ್ಷನ್ 2ರ ಮಹತ್ವವನ್ನು ಎತ್ತಿ ಹಿಡಿಯುವ ತೀರ್ಪೊಂದನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಪ್ರಕರಣವೊಂದರಲ್ಲಿ ನೀಡಿದೆ.
ಎಂಟು ಜನ ಪ್ರತ್ಯಕ್ಷ ಸಾಕ್ಷಿಗಳಿರುವ ಕೊಲೆ ಯತ್ನದ ಪ್ರಕರಣದಲ್ಲಿ, ಅಭಿಯೋಜಕ, ಅಷ್ಟೂ ಸಾಕ್ಷಿಗಳ ನೇರ ವಿಚಾರಣೆಯ ನಂತರವೇ ಎಲ್ಲರ ಪಾಟೀ ಸವಾಲಿಗೆ ಅವಕಾಶ ಮಾಡಿಕೊಡಬೇಕು ಎಂಬ ಆರೋಪಿಗಳ ಕೋರಿಕೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದ ಆರೋಪಿಗಳಾದ ಬಿಹಾರದ ಸಮಷ್ಟಿಪುರ ಜಿಲ್ಲೆಯ ಮಂಗಳಾಪುರದ ರವೀಂದ್ರ ಕುಮಾರ್ ಮತ್ತು ಮನೋಜ್ ಕುಮಾರ್ ಸಹಾನಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿರುವ ಪೀಠವು ಆರೋಪ ಪಟ್ಟಿಯಲ್ಲಿರುವ ಎಂಟೂ ಸಾಕ್ಷಿಗಳ ನೇರ ವಿಚಾರಣೆ ಪೂರ್ಣವಾಗುವ ತನಕ ಪಾಟೀ ಸವಾಲನ್ನು ಮುಂದೂಡಬೇಕು ಮತ್ತು ಪಾಟೀ ಸವಾಲು ನಡೆಸಲು ಒತ್ತಾಯ ಮಾಡಬಾರದು” ಎಂದು ಸತ್ರ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಹಾಲಿ ಪ್ರಕರಣದಲ್ಲಿ, ಒಂದೇ ಘಟನೆಗೆ ಹಲವಾರು ಸಾಕ್ಷಿಗಳನ್ನು ಪ್ರತ್ಯಕ್ಷದರ್ಶಿಗಳು ಎಂದು ಉಲ್ಲೇಖಿಸಲಾಗಿದೆ ಮತ್ತು ಇವರೆಲ್ಲಾ ನಿಕಟ ಸಂಬಂಧಿಗಳಾಗಿದ್ದಾರೆ ಎಂಬುದು ಗಮನಾರ್ಹ. ಹೀಗಾಗಿ, ಇವರಲ್ಲಿ ಆರಂಭಿಕ ಸಾಕ್ಷಿಯ ಮುಖ್ಯ ವಿಚಾರಣೆ ಮುಗಿದ ಕೂಡಲೇ ಆತನ ಪಾಟೀ ಸವಾಲಿಗೆ ಅವಕಾಶ ಮಾಡಿಕೊಟ್ಟಲ್ಲಿ ಅದರಿಂದ ಹೊರಹೊಮ್ಮುವ ಪ್ರಾಸಿಕ್ಯೂಷನ್ ದೌರ್ಬಲ್ಯವು ಮುಂದಿನ ವಿಚಾರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುವ ಅರ್ಜಿದಾರರ ಆತಂಕ ಯಥೋಚಿತವಾಗಿದೆ. ಮಾತ್ರವಲ್ಲ, ನ್ಯಾಯಯುತವಾಗಿಯೂ ಗುರುತಿಸಲಾದ ಅಂಶಗಳನ್ನು ಒಳಗೊಂಡಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
“ಸತ್ರ ನ್ಯಾಯಾಲಯವು ಸಿಆರ್‌ಪಿಸಿ ಸೆಕ್ಷನ್ 231(2)ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿ ತಿರಸ್ಕರಿಸಿರುವುದು ಅರ್ಜಿದಾರರೆಡೆಗಿನ ಗಂಭೀರ ಪೂರ್ವಗ್ರಹಕ್ಕೆ ಕಾರಣವಾಗಲಿದ್ದು, ನ್ಯಾಯಸಮ್ಮತ ವಿಚಾರಣೆಯನ್ನೇ ದುರ್ಬಲಗೊಳಿಸುವ ಸಾಧ್ಯತೆಯಿದೆ” ಎಂದು ನ್ಯಾಯಾಲಯ ಹೇಳಿದೆ.
“ತನಿಖೆಯ ಸಮಯದಲ್ಲಿ ಆರೋಪ ಪಟ್ಟಿಯಲ್ಲಿರುವ 1ರಿಂದ 8ರವರೆಗಿನ ಎಲ್ಲಾ ಸಾಕ್ಷಿಗಳು ಸೆಕ್ಷನ್ 161ರ ಅಡಿಯಲ್ಲಿ ಒಂದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಅಂಶದ ಹಿನ್ನೆಲೆಯಲ್ಲಿ ಸತ್ರ ನ್ಯಾಯಾಲಯ ಕಾನೂನಿಗೆ ಅನುಸಾರವಾಗಿ ತನ್ನ ವಿವೇಚನಾ ಅಧಿಕಾರ ಚಲಾಯಿಸುವಲ್ಲಿ ವಿಫಲವಾಗಿದೆ” ಎಂದೂ ಪೀಠ ತೀರ್ಪಿನಲ್ಲಿ ವಿವರಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎ ವಿಕ್ರಂ ರಾಜ್ ವಾದ ಮಂಡಿಸಿದ್ದರು.
ಪ್ರಕರಣದಲ್ಲಿನ ಆರೋಪ ಪಟ್ಟಿಯಲ್ಲಿರುವ 1ರಿಂದ 8ರವರೆಗಿನ ಸಾಕ್ಷಿಗಳು ಪ್ರತ್ಯಕ್ಷದರ್ಶಿ ಸಾಕ್ಷಿಗಳಾಗಿದ್ದಾರೆ. ಪ್ರತಿಯೊಬ್ಬ ಸಾಕ್ಷಿಯ ಮುಖ್ಯ ವಿಚಾರಣೆ ಮುಗಿಯುತ್ತಿದ್ದಂತೆಯೇ ತಡಮಾಡದೆ ಪಾಟೀ ಸವಾಲು ನಡೆಸಲು ನಿರ್ದೇಶಿಸಿದರೆ, ಪ್ರತಿವಾದ ಏನೆಂಬುದನ್ನು ಅಕಾಲಿಕವಾಗಿ ಬಹಿರಂಗಪಡಿಸಂತಾಗುತ್ತದೆ. ಆದ್ದರಿಂದ, ಪಾಟಿ ಸವಾಲನ್ನು ಮುಂದೂಡಬೇಕು ಎಂದು ಕೋರಿ ಅರ್ಜಿದಾರ ಆರೋಪಿಗಳು; ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಸೆಕ್ಷನ್ 231(2)ರ ಅಡಿಯಲ್ಲಿ ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಸತ್ರ ನ್ಯಾಯಾಲಯ ತಿರಸ್ಕರಿಸಿತ್ತು.
ಅರ್ಜಿದಾರರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ, ಭಾರತೀಯ ದಂಡ ಸಂಹಿತೆ–1860ರ ಸತ್ರ 34ರ (ಸಾಮಾನ್ಯ ಉದ್ದೇಶದಿಂದ ಹಲವರು ಸೇರಿ ಎಸಗುವ ಅಪರಾಧ) ಜೊತೆಗೆ 302 (ಕೊಲೆ), 307 (ಕೊಲೆ ಯತ್ನ), 323 (ಉದ್ದೇಶಪೂರ್ವಕವಾಗಿ ದೈಹಿಕ ಘಾತ ಉಂಟು ಮಾಡುವುದು), 324, 326, (ಅಪಾಯಕಾರಿ ಶಸ್ತ್ರಾಸ್ತ್ರ ಅಥವಾ ಸಾಧನಗಳನ್ನು ಅಂದರೆ ಚಾಕು, ಬೆಂಕಿ, ವಿಷ, ಪ್ರಾಣಿ ಇತ್ಯಾದಿಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ಯಾರಿಗಾದರೂ ಗಾಯಗೊಳಿಸುವಿಕೆ) ಮತ್ತು 504ರ (ಸಾರ್ವಜನಿಕ ಶಾಂತಿ ಭಂಗ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.