ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರ ಮೇಲೆ ಶೇ.50 ನಿರ್ಲಕ್ಷ್ಯದ ಹೊಣೆ ಹೊರಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿಯ (ಎಂಎಸಿಟಿ) ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿಹಿಡಿದಿದೆ.
ನಿರ್ಲಕ್ಷ್ಯದ ಹೊಣೆಯನ್ನು ತಮ್ಮ ಮೇಲೆ ಹೊರಿಸಿದ್ದ ಎಂಎಸಿಟಿ ಆದೇಶ ರದ್ದುಪಡಿಸಿ, ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಕೋರಿ ಮೂವರು ಬೈಕ್ ಸವಾರರು ಹಾಗೂ ಸಂಪೂರ್ಣ ನಿರ್ಲಕ್ಷ್ಯದ ಹೊಣೆಯನ್ನು ಬೈಕ್ ಸವಾರರ ಮೇಲೆಯೇ ಹೊರಿಸಬೇಕು ಎಂದು ಕಾರಿನ ವಿಮಾ ಕಂಪೆನಿ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯ್‌ಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ.
ಪ್ರಕರಣದಲ್ಲಿ ಬೈಕ್ ಸವಾರರು ಹಾಗೂ ಕಾರು ಚಾಲಕ ಪರಸ್ಪರ ದೂರುಗಳನ್ನು ದಾಖಲಿಸಿದ್ದು, ಕಾರು ಚಾಲಕ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಮೋಟಾರ್ ಸೈಕಲ್ ಸವಾರರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ‘ಬಿ’ ವರದಿ ಸಲ್ಲಿಸಲಾಗಿದೆ. ಹೀಗಿರುವಾಗ, ಬೈಕ್ ಸವಾರರ ನಿರ್ಲಕ್ಷ್ಯ ಸಾಬೀತುಪಡಿಸಬೇಕು ಎಂದರೆ ಕಾರು ಚಾಲಕನನ್ನು ವಿಚಾರಣೆಗೊಳಪಡಿಸಬೇಕಾಗುತ್ತದೆ. ಆದರೆ, ಕಾರು ಚಾಲಕ ನ್ಯಾಯ ಮಂಡಳಿಯ ವಿಚಾರಣೆಯಿಂದ ದೂರ ಉಳಿದಿದ್ದಾರೆ. ಇದರಿಂದ, ಅಪಘಾತಕ್ಕೆ ಯಾರು ಹೊಣೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಬಹುದಾದ ಉತ್ತಮ ಸಾಕ್ಷಿಯೊಂದು ನ್ಯಾಯ ಮಂಡಳಿಗೆ ಅಲಭ್ಯವಾದಂತಾಗಿದೆ. ಆದ್ದರಿಂದ, ಕಾರಿನ ಮಾಲೀಕ ಹಾಗೂ ಬೈಕ್ ಸವಾರರನ್ನು ಸಮಾನ ಹೊಣೆಗಾರರನ್ನಾಗಿಸಿರುವ ಎಂಎಸಿಟಿ ಕ್ರಮ ಸೂಕ್ತವಾಗಿದೆ. ಪರಿಹಾರದ ಮೊತ್ತದಲ್ಲಿ ಶೇ. 50 ಕಡಿತಗೊಳಿಸಿ ಉಳಿದ ಮೊತ್ತವನ್ನು ಗಾಯಾಳುಗಳಿಗೆ ಪಾವತಿಸುವಂತೆ ನ್ಯಾಯ ಮಂಡಳಿ ಹೊರಡಿಸಿರುವ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದಿರುವ ಹೈಕೋರ್ಟ್, ಎಲ್ಲ ಮೇಲ್ಮನವಿಗಳನ್ನೂ ವಜಾಗೊಳಿಸಿದೆ.
ಎಂಎಸಿಟಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಗಾಯಾಳುಗಳು, ಬೈಕ್ ಮೇಲೆ ಮೂವರು ಸವಾರಿ ಮಾಡುತ್ತಿದ್ದರು ಎಂದ ಮಾತ್ರಕ್ಕೆ ಅದನ್ನು ನಿರ್ಲಕ್ಷ್ಯ ಎನ್ನಲು ಸಾಧ್ಯವಿಲ್ಲ. ಕಾರು ಚಾಲಕ ವಿಚಾರಣೆಗೊಳಪಡದ ಕಾರಣಕ್ಕೆ ಬೈಕ್ ಸವಾರರ ಮೇಲೂ ಶೇ.50 ನಿರ್ಲಕ್ಷ್ಯದ ಹೊಣೆ ನಿಗದಿಪಡಿಸಿರುವ ನ್ಯಾಯ ಮಂಡಳಿಯ ಕ್ರಮವೇ ಸರಿಯಲ್ಲ. ಆದ್ದರಿಂದ, ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಕೋರಿದ್ದರು.
ಮತ್ತೊಂದೆಡೆ, ವಿಮಾ ಕಂಪೆನಿ ಸಹ ಮೇಲ್ಮನವಿ ಸಲ್ಲಿಸಿ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಒಂದು ಬೈಕ್‌ನ ಮೇಲೆ ಮೂವರು ಸವಾರಿ ಮಾಡುತ್ತಿದ್ದರು. ಪ್ರಕರಣ ಸಂಬಂಧ ಕಾರು ಚಾಲಕ ನೀಡಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ್ದ ಪೊಲೀಸರು ಬೈಕ್ ಸವಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ಯಾವ ಅಂಶಗಳನ್ನೂ ಪರಿಗಣಿಸದೆ ನ್ಯಾಯ ಮಂಡಳಿಯು ಬೈಕ್ ಸವಾರರ ಮೇಲೆ ಕೇವಲ ಶೇ.50 ಹೊಣೆಗಾರಿಕೆ ನಿಗದಿಪಡಿಸಿದೆ. ಆದ್ದರಿಂದ, ನಿರ್ಲಕ್ಷ್ಯದ ಹೊಣೆಯನ್ನು ಸಂಪೂರ್ಣವಾಗಿ ಬೈಕ್ ಸವಾರರ ಮೇಲೆ ಹೊರಿಸಬೇಕು ಎಂದು ಮನವಿ ಮಾಡಿತ್ತು.
ಪ್ರಕರಣದ ಹಿನ್ನೆಲೆ: ಮಂಡ್ಯ ಮೂಲದ ಬಿ ಸಿ ಮಹೇಂದ್ರ, ಬಿ ಎಸ್ ಜಗದೀಶ್ ಹಾಗೂ ಬಿ ಎಚ್ ವಿಶ್ವಾಸ್ ಬೆಂಗಳೂರಿನ ಮಹದೇವಪುರದ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಶಿವಕುಮಾರ್ ರಾಘವನ್ ಎಂಬವರ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್‌ನಲ್ಲಿದ್ದ ಮೂವರೂ ಗಾಯಗೊಂಡಿದ್ದರು. ಗಾಯಾಳುಗಳು ಪರಿಹಾರ ಕೋರಿ ಎಂಎಸಿಟಿಗೆ ಅರ್ಜಿ ಸಲ್ಲಿಸಿದ್ದರು. ಕಾರಿನ ಮಾಲೀಕ ಶಿವಕುಮಾರ್ ವಿಚಾರಣೆಗೆ ಗೈರಾಗಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯ ಮಂಡಳಿಯು ವಿಶ್ವಾಸ್‌ಗೆ 2,02,000 ರೂಪಾಯಿ, ಜಗದೀಶ್‌ಗೆ 1,47,000 ರೂಪಾಯಿ ಹಾಗೂ ಮಹೇಂದ್ರ ಪ್ರಸಾದ್‌ಗೆ 15 ಸಾವಿರ ರೂಪಾಯಿ ಪರಿಹಾರ ಘೋಷಿಸಿ 2018ರ ಜನವರಿ 17ರಂದು ಆದೇಶಿಸಿತ್ತು. ಆದರೆ, ಅಪಘಾತಕ್ಕೆ ಬೈಕ್ ಸವಾರರ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದ ಎಂಎಸಿಟಿ, ಬೈಕ್ ಸವಾರರು ಹಾಗೂ ಕಾರ್ ಮಾಲೀಕನ ಮೇಲೆ 50:50 ಅನುಪಾತದಲ್ಲಿ ನಿರ್ಲಕ್ಷ್ಯದ ಹೊಣೆ ಹೊರಿಸಿತ್ತಲ್ಲದೆ, ಪರಿಹಾರದ ಮೊತ್ತದಲ್ಲಿ ಶೇ. 50 ಪ್ರಮಾಣವನ್ನು ಗಾಯಾಳುಗಳಿಗೆ ಪಾವತಿಸುವಂತೆ ಕಾರ್‌ಗೆ ವಿಮೆ ಮಾಡಿಸಿದ್ದ ಕಂಪೆನಿಗೆ ನಿರ್ದೇಶಿಸಿತ್ತು.