ವಾಣಿಜ್ಯ ನಿವೇಶನಗಳ ನಿಯಮದಡಿ ಕಾರಣಗಳನ್ನು ನೀಡದೆ ನಿವೇಶನಗಳ ಹರಾಜು ಬಿಡ್ ತಿರಸ್ಕರಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
ಬಿಡ್ ತಿರಸ್ಕರಿಸಿ ಬಿಡಿಎ ಕಳುಹಿಸಿದ್ದ ನೋಟಿಸ್ ಅನ್ನು ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ರದ್ದತಿ ಕೋರಿ ಬಿಡಿಎ ಸಲ್ಲಿಸಿದ್ದ ರಿಟ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಜಿ ಬಸವರಾಜು ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
“ಬಿಡಿಎ ಕ್ರಮದಲ್ಲಿ ಯಾವುದೇ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಭಾವನೆ ಅಥವಾ ತಾರತಮ್ಯ ನೀತಿ ಅನುಸರಣೆ ಕಂಡು ಬಂದಿಲ್ಲ. ನಿಯಮಾನುಸಾರವೇ ಕ್ರಮ ಕೈಗೊಂಡಿದೆ. ಟೆಂಡರ್‌ದಾರರು ಇತರೆ ಬಿಡ್‌ದಾರರ ಜತೆ ಸೇರಿ ತಮ್ಮದೇ ವ್ಯೂಹ ರಚಿಸಿಕೊಂಡು ವಂಚನೆ ಮಾಡಲು ಯತ್ನಿಸಿರುವುದನ್ನು ಸಾಬೀತುಪಡಿಸುವ ಯಾವುದೇ ಅಂಶಗಳು ಇಲ್ಲಿ ಕಂಡು ಬಂದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಬಿಡಿಎ ಹೊರಡಿಸಿರುವ ಇ-ಹರಾಜು ಅಧಿಸೂಚನೆಯ ನಿಯಮ ಮತ್ತು ನಿಬಂಧನೆಗಳಡಿ, ಬಿಡ್ ತಿರಸ್ಕರಿಸುವ ಮುನ್ನ ಯಾವುದೇ ವಿಚಾರಣೆ ನಡೆಸಲು ಅವಕಾಶವಿಲ್ಲ. ನಿಯಮಗಳ ಪ್ರಕಾರ ಯಾವುದೇ ಯಶಸ್ವಿ ಬಿಡ್ ಅನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಧಿಕಾರ ಬಿಡಿಎಗೆ ಇದೆ. ಹಾಗಾಗಿ, ಬಿಡಿಎ ಆದೇಶದಲ್ಲಿ ಯಾವುದೇ ಲೋಪವಾಗಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಬಿಡ್ ತಿರಸ್ಕರಿಸಿ ಬಿಡಿಎ ಕಳುಹಿಸಿದ್ದ ನೋಟಿಸ್ ಅನ್ನು ರದ್ದುಗೊಳಿಸಿದ್ದ ಏಕಸದಸ್ಯ ಪೀಠವು ನಾಗರಭಾವಿಯ ಸಚಿನ್ ನಾಗರಾಜಪ್ಪ ಎಂಬುವರ ಅರ್ಜಿಯನ್ನು ಪುರಸ್ಕರಿಸಿತ್ತು. ಟೆಂಡರ್‌ನಲ್ಲಿ ನಮೂದು ಮಾಡಿರುವಂತೆ 1,54,000 ಚದರ ಮೀಟರ್ ಜಾಗವನ್ನು ಅರ್ಜಿದಾರರಿಗೆ ಒಪ್ಪಿಸಿ ಎಂದು ಆದೇಶಿಸಿತ್ತು.
ಬಿಡಿಎ ವಾಣಿಜ್ಯ ನಿವೇಶನಗಳು ಮತ್ತು ಮೂಲೆ ನಿವೇಶಗಳ ವಿಲೇವಾರಿ ನಿಯಮ–1984ಕ್ಕೆ ಏಕಸದಸ್ಯ ಪೀಠದ ತೀರ್ಪು ವಿರುದ್ಧವಾಗಿದೆ. ರಾಜ್ಯ ಸರ್ಕಾರ ಅದಕ್ಕಾಗಿಯೇ ನಿಯಮಗಳನ್ನು ರೂಪಿಸಿದೆ ಮತ್ತು ಬಿಡಿಎಗೆ ಕಾರಣಗಳನ್ನು ನೀಡದೆ ಬಿಡ್ ತಿರಸ್ಕರಿಸುವ ಅಥವಾ ಒಪ್ಪಿಕೊಳ್ಳುವ ಅಧಿಕಾರವಿದೆ ಎಂದು ವಿಭಾಗೀಯ ಪೀಠದಲ್ಲಿ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು.