ಟಿಆರ್‌ಪಿಗಾಗಿ ಜನರ ಜೀವನವನ್ನೇ ನಾಶ ಮಾಡುವ ಹಂತಕ್ಕೆ ಮಾಧ್ಯಮಗಳ ಹೆಜ್ಜೆ: ಹೈಕೋರ್ಟ್‌ ಬೇಸರ

“ಮಾಧ್ಯಮದವರಿಗೆ ‌ನಿಮ್ಮದೇ ಜವಾಬ್ದಾರಿಗಳಿರುತ್ತವೆ. ನೀವು ಜನರ ಅಭಿಪ್ರಾಯ ಸಂಗ್ರಹಿಸುತ್ತೀರಿ, ನೀವು ರಾಷ್ಟ್ರಗಳನ್ನು ನಿರ್ಮಾಣ ಮಾಡಬಹುದು. ನಿಮ್ಮಲ್ಲಿರುವ ಸಾಮರ್ಥ್ಯವನ್ನು ನೀವು ಅರ್ಥಮಾಡಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದ ಹೈಕೋರ್ಟ್‌.
Media
Media
Published on

ಮಾಧ್ಯಮಗಳು ಕೆಲವೊಮ್ಮೆ ಟಿಆರ್‌ಪಿಗಾಗಿ ಜನರ ಜೀವನವನ್ನೇ ನಾಶ ಮಾಡುವ ಹಂತಕ್ಕೆ ಹೋಗುತ್ತಿವೆ ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಮಾಧ್ಯಮ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಜವಾಬ್ದಾರಿ ಪ್ರದರ್ಶಿಸಬೇಕು ಎಂದಿದೆ.

ಇಂಧನ ಸಚಿವ ಕೆ ಜೆ ಜಾರ್ಜ್ ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ರದ್ದು ಕೋರಿ ಕನ್ನಡಪ್ರಭ ದಿನಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M I Arun
Justice M I Arun

ಕೆಲ ಕಾಲ ವಾದ ಆಲಿಸಿದ ಪೀಠವು “ಮಾಧ್ಯಮದವರಿಗೆ ‌ನಿಮ್ಮದೇ ಜವಾಬ್ದಾರಿಗಳಿರುತ್ತವೆ. ನೀವು ಜನರ ಅಭಿಪ್ರಾಯ ಸಂಗ್ರಹಿಸುತ್ತೀರಿ, ನೀವು ರಾಷ್ಟ್ರಗಳನ್ನು ನಿರ್ಮಾಣ ಮಾಡಬಹುದು. ನಿಮ್ಮಲ್ಲಿರುವ ಸಾಮರ್ಥ್ಯವನ್ನು ನೀವು ಅರ್ಥಮಾಡಿಕೊಳ್ಳಬೇಕು. ಟಿಆರ್‌ಪಿಗಳಿಸುವ ಧಾವಂತದಲ್ಲಿ ಮಾಧ್ಯಮಗಳು ಕೆಲವೊಮ್ಮೆ ವ್ಯಕ್ತಿಗಳ ಜೀವನವನ್ನೇ ನಾಶಪಡಿಸುವುದನ್ನು ನಾವು ಕಾಣುತ್ತಿದ್ದೇವೆ. ಪತ್ರಿಕಾಗೋಷ್ಠಿ ನಡೆಸಿದ್ದವರು ಹೇಳಿದ್ದನ್ನು ನೀವು ವರದಿ ಮಾಡಬಹುದು, ಹಾಗೆಂದ ಮಾತ್ರಕ್ಕೆ ಅದೇ ಸತ್ಯವೆಂದು ಬಣ್ಣ ಹಚ್ಚಲು ಸಾಧ್ಯವಿಲ್ಲ” ಎಂದು ತೀಕ್ಷ್ಣವಾಗಿ ನುಡಿಯಿತು.

ಅರ್ಜಿದಾರರ ಪರ ವಕೀಲ ಎಸ್ ಸುದರ್ಶನ್ “ಕರ್ನಾಟಕ ರಾಷ್ಟ್ರ ಸಮಿತಿ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿವಾದಿ (ಕೆ ಜೆ ಜಾರ್ಜ್) ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ (ಇಡಿ) ದೂರು ದಾಖಲಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಸಂಬಂಧ ಪತ್ರಿಕಾಗೋಷ್ಠಿಯನ್ನೂ ಸಹ ನಡೆಸಲಾಗಿತ್ತು. ಆ ಪತ್ರಿಕಾ ಪ್ರಕಟಣೆಗೆ ಅನುಗುಣವಾಗಿಯೇ ಎಲ್ಲ ಲೇಖನಗಳನ್ನು ವರದಿ ಮಾಡಲಾಗಿದೆ ಎಂದು ತಿಳಿಸಿದರಲ್ಲದೆ, ಅರ್ಜಿದಾರರು ಪ್ರತಿವಾದಿಯ ಮಾನನಷ್ಟ ಉಂಟು ಮಾಡುವಂಥ ಯಾವುದೇ ವಿಷಯವನ್ನು ಉದ್ದೇಶಪೂರ್ವಕವಾಗಿ ವರದಿ ಮಾಡಿಲ್ಲ” ಎಂದು ಪೀಠಕ್ಕೆ ವಿವರಿಸಿದರು.

ಕೆ ಜೆ ಜಾರ್ಜ್ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಪತ್ರಿಕೆಯಲ್ಲಿ ಪ್ರಕಟವಾದ ಎಲ್ಲ ವರದಿಗಳನ್ನು ಗಮನದಲ್ಲಿಟ್ಟುಕೊಂಡೇ ವಿಚಾರಣಾ‌ ನ್ಯಾಯಾಲಯ ಅರ್ಜಿದಾರರ ವಿರುದ್ಧ ಸಂಜ್ಞೇ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ, ವಿಚಾರಣಾ ನ್ಯಾಯಾಲಯದಲ್ಲಿ ಇತರ ಆರೋಪಿಗಳ ವಿರುದ್ಧದ ವಿಚಾರಣೆಯೂ ನಡೆಯದಂತಾಗಿದೆ” ಎಂದು ತಿಳಿಸಿದರು.

“ವಿಚಾರಣಾ ನ್ಯಾಯಾಲಯವು ಸಂಜ್ಞೇ ತೆಗೆದುಕೊಂಡ ಆದೇಶದಲ್ಲಿ ಉಲ್ಲೇಖಿಸಲಾದ ಲೇಖನಗಳನ್ನು ಪರಿಶೀಲಿಸಿದ ಪೀಠವು ಮಾಧ್ಯಮದವರು ಬಹಳ ಶಕ್ತಿಶಾಲಿಗಳು. ಅವುಗಳಿಗೆ ಕಟ್ಟುವ, ಕೆಡವುವ ಸಾಮರ್ಥ್ಯವಿದ್ದು, ಈ ವೇಳೆ ಯಾರಿಗಾದರೂ ನೋವುಂಟಾಗಬಹುದು. ಆದ್ದರಿಂದ, ಮಾಧ್ಯಮಗಳು ಸಾಧ್ಯವಾದಷ್ಟೂ ಜಾಗರೂಕವಾಗಿರಬೇಕು. ಒಂದು ಗಾಳಿಸುದ್ದಿ ಹೇಳಿಕೆಯು ಗಾಳಿಸುದ್ದಿಯಂತೆಯೇ ಇರಬೇಕೇ ಹೊರತು ಅದೇ ಪ್ರತಿಪಾದನೆಯಾಗಿರಬಾರದು. ಇದನ್ನು ಮಾಧ್ಯಮದವರು ಅರ್ಥ ಮಾಡಿಕೊಳ್ಳಬೇಕು” ಎಂದು ಕಿವಿಮಾತು ಹೇಳಿತು.

“ಒಂದೊಮ್ಮೆ ಅರ್ಜಿದಾರರು ಕ್ಷಮೆ ಯಾಚಿಸಿದರೆ ಪ್ರಕರಣವನ್ನು ರದ್ದುಪಡಿಸಲಾಗುವುದು. ನಿಮಗೆ ಹೆಚ್ಚಿನ ಜವಾಬ್ದಾರಿಗಳಿವೆ. ಅದನ್ನು ನೀವು ಸಮರ್ಥವಾಗಿ ನಿಭಾಯಿಸಬೇಕು. ಕ್ಷಮೆಯಾಚನೆಯೊಂದಿಗೆ ಬಂದರೆ, ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದ ಪೀಠ, ವರದಿಯಲ್ಲಿರುವ ಹೇಳಿಕೆ ನಿಮ್ಮದಲ್ಲ.‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದನ್ನು ಮಾತ್ರ ಪ್ರಕಟಿಸಿದ್ದೇವೆ ಎಂದು ನೀವು ಸ್ಪಷ್ಟನೆ ನೀಡುತ್ತಿದ್ದೀರಿ ಎಂದರೆ, ಆ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಎಂದರ್ಥ. ನಿಮ್ಮ ಹೇಳಿಕೆಗಳು ಯಾರನ್ನಾದರೂ ನೋಯಿಸಿದ್ದರೆ ಅಥವಾ ಬೇರೆ ಅರ್ಥ ಕಲ್ಪಿಸಿದ್ದರೆ ನೀವು ಅದಕ್ಕೆ ಕ್ಷಮೆ ಯಾಚಿಸಬೇಕು” ಎಂದು ಮೌಖಿಕವಾಗಿ ಹೇಳಿತು.

ಅರ್ಜಿದಾರರ ಪರ ವಕೀಲರು “ನ್ಯಾಯಾಲಯದ ಸಲಹೆಯ ಬಗ್ಗೆ ನಮ್ಮ ಕಕ್ಷಿದಾರರಿಂದ ಸೂಚನೆ ಪಡೆದು ತಿಳಿಸಲಾಗುವುದು, ಅದಕ್ಕಾಗಿ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿತು. ಜೊತೆಗೆ, ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

ಪ್ರಕರಣದ ಹಿನ್ನೆಲೆ: ಆಧಾರರಹಿತ, ದುರುದ್ದೇಶಪೂರಿತ ಆರೋಪಗಳನ್ನು ಮಾಡಿ ನನ್ನ ತೇಜೋವಧೆ ಮಾಡಲಾಗಿದೆ ಎಂದು ಆಕ್ಷೇಪಿಸಿ ಕೆ ಜೆ ಜಾರ್ಜ್ ಅವರು ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮತ್ತಿತರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜತೆಗೆ, ವರದಿ ಪ್ರಕಟಿಸಿದ್ದ ಕನ್ನಡ ಪ್ರಭ ಪ್ರಧಾನ ಸಂಪಾದಕರ ವಿರುದ್ಧವೂ ಮೊಕದ್ದಮೆ ದಾಖಲಿಸಿದ್ದರು.

ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು 2020ರ ಜನವರಿ 17ರಂದು ಪ್ರಕರಣವನ್ನು ಸಂಜ್ಞೇ ಪರಿಗಣಿಸಿ ಆದೇಶಿಸಿದ್ದರು. ಇದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ಹಾಗೂ ಇಡೀ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ರವಿ ಹೆಗಡೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, 2021ರ ಜೂನ್ 15ರಂದು ಅರ್ಜಿದಾರರ ವಿರುದ್ಧದ ಪ್ರಕ್ರಿಯೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು.

Kannada Bar & Bench
kannada.barandbench.com