ಸರ್ಕಾರಿ ವಕೀಲರಿಗೆ ಮಾಹಿತಿ ನೀಡದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಲಾಗುವುದು: ಹೈಕೋರ್ಟ್‌ ಎಚ್ಚರಿಕೆ

“ಯಾವುದೇ ಪ್ರಕರಣದಲ್ಲಿ ಸರ್ಕಾರಿ ವಕೀಲರು ಮಾಹಿತಿ ಕೋರಿದರೆ, ತಡ ಮಾಡದೆ ಸರ್ಕಾರಿ ಅಧಿಕಾರಿಗಳು ಒದಗಿಸಬೇಕು. ಒಂದೊಮ್ಮೆ ತಡ ಮಾಡಿದರೆ ಅಥವಾ ಮಾಹಿತಿ ನೀಡದೆ ಹೋದರೆ, ಆ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ” ಎಂದಿರುವ ನ್ಯಾಯಾಲಯ.
Justice Suraj Govindraj
Justice Suraj Govindraj
Published on

ಸರ್ಕಾರಿ ವಕೀಲರು ಕೋರಿದ ಮಾಹಿತಿ ನೀಡದ ಅಥವಾ ಮಾಹಿತಿ ನೀಡಲು ವಿಳಂಬಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸಲು ಆದೇಶಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಠಿಣ ಎಚ್ಚರಿಕೆ ನೀಡಿದೆ.

ಚಿತ್ರದುರ್ಗದ ಹಿರಿಯ ನಾಗರಿಕರಾದ ವಿಶ್ವನಾಥನ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಮೇಲಿನಂತೆ ಹೇಳಿದೆ.

ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ಅರ್ಜಿದಾರರು, ಹಿರಿಯ ನಾಗರಿಕರು ಮತ್ತು ಪೋಷಕರ ಕಲ್ಯಾಣ ಕಾಯಿದೆ ಅಡಿ ಪರಿಹಾರ ಕೋರಿ ಚಿತ್ರದುರ್ಗದ ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ಸೇವಾವಧಿಯಲ್ಲಿ ಗಳಿಸಿದ್ದ ಹಣದಲ್ಲಿ ನಿವೇಶನ ಖರೀದಿಸಿ ನಿರ್ಮಿಸಿರುವ ಮನೆ, ತಮ್ಮ ಮಗ ಮತ್ತು ಮಗಳ ಸ್ವಾಧೀನದಲ್ಲಿದೆ. ಅವರು ತಮ್ಮನ್ನು ಪಾಲನೆ ಮಾಡುತ್ತಿಲ್ಲ. ಇದರಿಂದ ಮನೆಯನ್ನು ತಮ್ಮ ಸುಪರ್ದಿಗೆ ಒಪ್ಪಿಸಲು ಮಗ ಮತ್ತು ಮಗಳಿಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿ, ಮನೆಯನ್ನು ತಂದೆಗೆ ಬಿಟ್ಟುಕೊಡುವಂತೆ ವಿಶ್ವನಾಥ್‌ ಅವರ ಮಗಳು ಮತ್ತು ಮಗನಿಗೆ ನಿರ್ದೇಶಿಸಿ 2023ರ ಫೆಬ್ರವರಿ 22ರಂದು ಆದೇಶಿಸಿದ್ದರು.

ಆದರೂ ಮಗಳ ಮತ್ತು ಮಗ ಮನೆ ಬಿಟ್ಟುಕೊಡದಕ್ಕೆ ಉಪ ವಿಭಾಗಾಧಿಕಾರಿ ಆದೇಶ ಜಾರಿಗೊಳಿಸುವಂತೆ ಕೋರಿ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಮತ್ತು ತಹಸೀಲ್ದಾರ್‌ಗೆ 2023ರ ಏಪ್ರಿಲ್‌ 5ರಂದು ಅರ್ಜಿದಾರರು ಮನವಿ ಸಲ್ಲಿಸಿದ್ದರು. ಇಷ್ಟಾದರೂ ಪ್ರಯೋಜನವಾಗದ್ದಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿಶ್ವನಾಥನ್‌, ತಮ್ಮ ಮನವಿಪ ಪರಿಗಣಿಸಿ ಅಗತ್ಯ ಕ್ರಮ ಜರುಗಿಸಲು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ಗೆ ನಿರ್ದೇಶಿಸುವಂತೆ ಕೋರಿದ್ದರು.

ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪ್ರಕರಣದ ಕುರಿತು ಮಾಹಿತಿ ಪಡೆದು ತಿಳಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿತ್ತು. ಈ ಸೂಚನೆ ಮೇರೆಗೆ ಹಲವು ಬಾರಿ ಕೋರಿದರೂ ಚಿತ್ರದುರ್ಗದ ತಹಸೀಲ್ದಾರ್ ಮಾಹಿತಿ ನೀಡುತ್ತಿಲ್ಲ ಎಂದು ಸರ್ಕಾರಿ ವಕೀಲರು 2025ರ ಡಿಸೆಂಬರ್‌ 8ರಂದು ಹೈಕೋರ್ಟ್‌ಗೆ ತಿಳಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯವು ಚಿತ್ರದುರ್ಗದ ತಹಸೀಲ್ದಾರ್‌ಗೆ ₹50 ಸಾವಿರ ದಂಡ ಸಹಿತ ವಾರೆಂಟ್‌ ಜಾರಿಗೊಳಿಸಿ ಡಿಸೆಂಬರ್‌ 16ರಂದು ವಿಚಾರಣೆಗೆ ಖುದ್ದು ಹಾಜರಿರುವಂತೆ ನಿರ್ದೇಶಿಸಿತ್ತು. ಅದರಂತೆ ಮಂಗಳವಾರ ತಹಸೀಲ್ದಾರ್‌ ವಿಚಾರಣೆಗೆ ಹಾಜರಿದ್ದರು.

ಆಗ ನ್ಯಾಯಮೂರ್ತಿಗಳು “ಏನ್ರಿ ತಹಸೀಲ್ದಾರ್‌... ಏಕೆ ನೀವು ಸರ್ಕಾರಿ ವಕೀಲರಿಗೆ ಮಾಹಿತಿ ನೀಡುತ್ತಿಲ್ಲ?” ಎಂದು ಪ್ರಶ್ನಿಸಿದರು.

ಇದಕ್ಕೆ ತಹಶೀಲ್ದಾರ್‌ ಅವರು “ಸ್ವಾಮಿ.. ಮಾಹಿತಿ ನೀಡಲಾಗಿದೆ” ಎಂದರು.

ಅದಕ್ಕೆ ಪೀಠವು “ಏಕೆ ಸುಳ್ಳು ಹೇಳುತ್ತಿರಿ? ಸರ್ಕಾರಿ ವಕೀಲರು ಪದೇ ಪದೇ ತಿಳಿಸಿದ್ದರೂ ನೀವು ಮಾಹಿತಿ ನೀಡಿಲ್ಲ. ಅವರು ಯಾವಾಗ ಮಾಹಿತಿ ಕೇಳಿದರು? ನೀವು ಯಾವಾಗ ನೀಡಿದ್ದೀರಿ? ಎಂಬ ಬಗ್ಗೆ ದಿನಾಂಕ, ಸಮಯ ಸಹಿತ ದಾಖಲೆ ಸಿಗುತ್ತವೆ. ಆ ಬಗ್ಗೆ ವಿಚಾರಣೆ ನಡೆಸಲು ಆದೇಶಿಸಬೇಕೆ? ವಿಚಾರಣೆಯಲ್ಲಿ ವಿಳಂಬವಾಗಿ ಮಾಹಿತಿ ನೀಡಿರುವುದು ದೃಢಪಟ್ಟರೆ, ನಿಮ್ಮನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಲಾಗುವುದು. ವಿಚಾರಣೆಗೆ ಆದೇಶಿಸಲೇ?” ಎಂದರು.

ಆಗ ಸರ್ಕಾರಿ ವಕೀಲರು, ಸದ್ಯ ಉಪ ವಿಭಾಗಾಧಿಕಾರಿಯ ಆದೇಶದಂತೆ ಕಳೆದ ಭಾನುವಾರ ಮನೆಯನ್ನು ಅರ್ಜಿದಾರರ ಸ್ವಾಧೀನಾನುಭವಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿ ಮೆಮೊ ಸಲ್ಲಿಸಿದರು.

ಆಗ ಪೀಠವು “ಯಾವುದೇ ಪ್ರಕರಣದಲ್ಲಿ ಸರ್ಕಾರಿ ವಕೀಲರು ಮಾಹಿತಿ ಕೋರಿದರೆ, ತಡ ಮಾಡದೆ ಸರ್ಕಾರಿ ಅಧಿಕಾರಿಗಳು ಒದಗಿಸಬೇಕು. ಒಂದೊಮ್ಮೆ ತಡ ಮಾಡಿದರೆ ಅಥವಾ ಮಾಹಿತಿ ನೀಡದೆ ಹೋದರೆ, ಆ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ  ಕ್ರಮ ಜರುಗಿಸಬೇಕಾಗುತ್ತದೆ” ಎಂದಿತು. ನಂತರ ಸರ್ಕಾರಿ ವಕೀಲರ ಮೆಮೊ ದಾಖಲಿಸಿಕೊಂಡು, ಉಪ ವಿಭಾಗಾಧಿಕಾರಿಯ ಆದೇಶ ಪಾಲನೆ ಆಗಿರುವುದರಿಂದ ಪ್ರಕರಣದ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿತು.

Kannada Bar & Bench
kannada.barandbench.com