ವಿಡಿಯೊ ಕಾನ್ಫರೆನ್ಸ್‌ ಮೂಲಕ ಹೈಕೋರ್ಟ್‌, ಅಧೀನ ನ್ಯಾಯಾಲಯಗಳಲ್ಲಿ ಆಗಸ್ಟ್‌ ಅಂತ್ಯಕ್ಕೆ 1.38 ಕೋಟಿ ಪ್ರಕರಣ ವಿಲೇವಾರಿ

ಡಿಜಿಟಲ್‌ ನ್ಯಾಯಾಲಯಕ್ಕೆ ಅತ್ಯಗತ್ಯವಾದ ಇ-ಫೈಲಿಂಗ್‌ ನಿಯಮಗಳು, ವ್ಯವಸ್ಥೆ ಮತ್ತು ಒಟ್ಟಾರೆ ಮೂಲಸೌಕರ್ಯ ಸೌಲಭ್ಯಗಳು ನಿಧಾನ ಗತಿಯಲ್ಲಿ ಪ್ರಗತಿ ಕಾಣುತ್ತಿವೆ ಎಂಬುದು ದತ್ತಾಂಶದಿಂದ ತಿಳಿದುಬಂದಿದೆ.
virtual hearings
virtual hearings

ಕೊರೊನಾ ವೈರಸ್‌ ದಾಳಿಯಿಂದಾಗಿ ದೇಶದ ನ್ಯಾಯಾಲಯಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ಮೊರೆ ಹೋಗಿದ್ದು, 2020ರ ಮಾರ್ಚ್‌ನಿಂದ 2021ರ ಆಗಸ್ಟ್‌ ಅಂತ್ಯದವರೆಗೆ 1.38 ಕೋಟಿ ಪ್ರಕರಣಗಳನ್ನು ವಿಲೇವಾರಿ ಮಾಡಿವೆ ಎಂದು ಸುಪ್ರೀಂ ಕೋರ್ಟ್‌ನ ಇ-ಸಮಿತಿಯ ನ್ಯೂಸ್‌ ಲೆಟರ್‌ನಲ್ಲಿ ತಿಳಿಸಲಾಗಿದೆ.

ದೇಶದ 28 ಹೈಕೋರ್ಟ್‌ಗಳು ಆಗಸ್ಟ್‌ ಅಂತ್ಯಕ್ಕೆ 48,60,500 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ಜಿಲ್ಲಾ ನ್ಯಾಯಾಲಯಗಳು ಒಟ್ಟು 89,57,395 ಪ್ರಕರಣಗಳನ್ನು ವಿಲೇವಾರಿ ಮಾಡಿವೆ. ದೆಹಲಿ ನ್ಯಾಯಾಲಯಗಳು ಒಟ್ಟಾರೆ ಪ್ರಕರಣಗಳ ಪೈಕಿ ಶೇ. 17ರಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ಅಲಹಾಬಾದ್‌ (ಶೇ. 13.8) ಮತ್ತು ಪಟ್ನಾ (ಶೇ. 9.86) ನಂತರದ ಸ್ಥಾನದಲ್ಲಿವೆ.

22 ಹೈಕೋರ್ಟ್‌ಗಳಲ್ಲಿ ಇ-ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕಲ್ಕತ್ತಾ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ತೆಲಂಗಾಣ ಮತ್ತು ಉತ್ತರಾಖಂಡ ಹೈಕೋರ್ಟ್‌ಗಳಲ್ಲಿ ಇ-ಸೇವಾ ಕೇಂದ್ರಗಳು ಚಾಲನೆ ಪಡೆದಿಲ್ಲ. ಜಿಲ್ಲಾ ನ್ಯಾಯಾಲಯಗಳ ಪೈಕಿ ಎಂಟು ರಾಜ್ಯಗಳು ಇನ್ನಷ್ಟೇ ಇ-ಸೇವಾ ಕೇಂದ್ರಗಳಿಗೆ ಚಾಲನೆ ನೀಡಬೇಕಿದೆ.

21 ಹೈಕೋರ್ಟ್‌ಗಳಲ್ಲಿ ವಿಡಿಯೊ ಕಾನ್ಫರೆನ್ಸ್‌ ವಿಚಾರಣೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ನಿಯಮಗಳನ್ನು ರೂಪಿಸಲಾಗಿದ್ದು, ಬಾಂಬೆ, ಕಲ್ಕತ್ತಾ, ಆಂಧ್ರಪ್ರದೇಶ ಮತ್ತು ಪಂಜಾಬ್‌ ಮತ್ತು ಹರಿಯಾಣ ಸೇರಿದಂತೆ ಆರು ಹೈಕೋರ್ಟ್‌ಗಳಲ್ಲಿ ಇನ್ನಷ್ಟೇ ಅದನ್ನು ಜಾರಿ ಮಾಡಬೇಕಿದೆ. 21 ಹೈಕೋರ್ಟ್‌ಗಳಲ್ಲಿ ಇ-ಶುಲ್ಕ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಡಿಜಿಟಲ್‌ ನ್ಯಾಯಾಲಯಕ್ಕೆ ಅತ್ಯಗತ್ಯವಾದ ಇ-ಫೈಲಿಂಗ್‌ ನಿಯಮಗಳು, ವ್ಯವಸ್ಥೆ ಮತ್ತು ಒಟ್ಟಾರೆ ಮೂಲಸೌಕರ್ಯ ಸೌಲಭ್ಯಗಳು ನಿಧಾನ ಗತಿಯಲ್ಲಿ ಪ್ರಗತಿ ಕಾಣುತ್ತಿದೆ ಎಂಬುದು ದತ್ತಾಂಶದಿಂದ ತಿಳಿದುಬಂದಿದೆ. ಕೇವಲ 11 ರಾಜ್ಯಗಳಲ್ಲಿ ಇ-ಫೈಲಿಂಗ್‌ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, 16 ರಾಜ್ಯಗಳು ಇನ್ನಷ್ಟೇ ಅದನ್ನು ಜಾರಿಗೊಳಿಸಬೇಕಿದೆ.

ಪರಸ್ಪರ ಕಾರ್ಯಸಾಧ್ಯವಾಗಿಸುವ ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯನ್ನು (ಐಸಿಜೆಎಸ್‌) ಇನ್ನೂ ಏಳು ಹೈಕೋರ್ಟ್‌ಗಳಲ್ಲಿ ಜಾರಿ ಮಾಡಬೇಕಿದೆ. ಐಸಿಜೆಎಸ್‌ ಹೊಸ ಯೋಜನೆಯಾಗಿದ್ದು, ಇದರಿಂದಾಗಿ ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿವಿಧ ಅಂಗಗಳಾದ ನ್ಯಾಯಾಲಯಗಳು, ಪೊಲೀಸ್‌, ಜೈಲುಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ದತ್ತಾಂಶ ಮತ್ತು ಮಾಹಿತಿ ಹಂಚಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.

Also Read
ವಿಡಿಯೊ ಕಾನ್ಫರೆನ್ಸ್‌ ಮೂಲಕ ಅತಿ ಹೆಚ್ಚು ಪ್ರಕರಣಗಳ ವಿಲೇವಾರಿ: 28 ಹೈಕೋರ್ಟ್‌ಗಳ ಪೈಕಿ ಕರ್ನಾಟಕಕ್ಕೆ ಎರಡನೇ ಸ್ಥಾನ

“ಐಸಿಜೆಎಸ್‌ ವೇದಿಕೆಯ ಮೂಲಕ ಎಲ್ಲಾ ಹೈಕೋರ್ಟ್‌ಗಳು ಮತ್ತು ಅಧೀನ ನ್ಯಾಯಾಲಯಗಳಲ್ಲಿನ ಎಫ್‌ಐಆರ್‌ ಮೆಟಾಡೇಟಾ, ಆರೋಪ ಪಟ್ಟಿಯನ್ನು ಪಡೆಯಬಹುದಾಗಿದೆ. ಎಫ್‌ಐಆರ್‌, ಪ್ರಕರಣದ ಡೈರಿ, ನ್ಯಾಯಾಲಯದ ಬಳಕೆಗೆ ಪೊಲೀಸರು ಅಪ್‌ಲೋಡ್‌ ಮಾಡಿದ ಆರೋಪಪಟ್ಟಿಯೂ ಇಲ್ಲಿ ಲಭ್ಯವಿದೆ” ಎಂದು ಹೇಳಲಾಗಿದೆ.

ರಾಷ್ಟ್ರೀಯ ಸೇವೆ ಮತ್ತು ವಿದ್ಯುನ್ಮಾನ ನಿಗಾ ಪ್ರಕ್ರಿಯೆ (ಎನ್‌ಎಸ್‌ಟಿಇಪಿ) 11 ಹೈಕೋರ್ಟ್‌ಗಳಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ. ಎನ್‌ಎಸ್‌ಟಿಇಪಿ ಸೇವಾ ಪ್ರಕ್ರಿಯೆಗೆ ವೇಗ ನೀಡಲಿದ್ದು, ಸರ್ವರ್‌ಗಳ ಪ್ರಕ್ರಿಯೆ ಬಗ್ಗೆ ಮೇಲಿಂದ ಮೇಲೆ ಎತ್ತಲಾದ ಆಕ್ಷೇಪಗಳನ್ನು ನಿವಾರಿಸುವ ಮೂಲಕ ಅದನ್ನು ಇನ್ನಷ್ಟು ಪಾರದರ್ಶಕವಾಗಿಸಲಿದೆ ಎಂದು ಇ-ಸಮಿತಿಯು ಹೇಳಿದೆ.

Related Stories

No stories found.
Kannada Bar & Bench
kannada.barandbench.com