
ನಿರ್ದಿಷ್ಟ ಪ್ರಕರಣದಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಆರೋಪಿಗಳು ತಾವು ಇತರ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದೇವೆಯೇ ಎಂಬುದನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸುವ ನಿಯಮ ರೂಪಿಸುವ ವಿಚಾರ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಹೈಕೋರ್ಟ್‌ಗಳಿಗೆ ಸೂಚಿಸಿದೆ [ಕೌಶಲ್ ಸಿಂಗ್ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
ಜಾಮೀನು ಕೋರುವ ಆರೋಪಿಗಳು ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ವಿವರ ಬಹಿರಂಗಪಡಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರೂಪಿಸಿದ್ದ ನಿಯಮವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ಗಮನಿಸಿತು.
"ಜಾಮೀನು ಕೋರುವಾಗ ಆರೋಪಿಯು ತನ್ನ ವಿರುದ್ಧ ಈ ಹಿಂದೆ ದಾಖಲಾದ ಕ್ರಿಮಿನಲ್ ಪ್ರಕರಣಗಳ ಕುರಿತು ಬಹಿರಂಗಪಡಿಸಬೇಕು ಎಂಬ ಷರತ್ತು ವಿಧಿಸುವುದನ್ನು ದೇಶದ ಪ್ರತಿಯೊಂದು ಹೈಕೋರ್ಟ್ ಕೂಡ ಇದೇ ರೀತಿಯ ನಿಯಮ ಅಡಕಗೊಳಿಸಲು ಪರಿಗಣಿಸಬೇಕು ಎಂದು ನಾವು ಭಾವಿಸುತ್ತೇವೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೊದಲಿನಿಂದಲೂ ಅಂತಹ ನಿಯಮಾವಳಿ ಅಸ್ತಿತ್ವದಲ್ಲಿಲ್ಲದಿದ್ದರೆ, ಸಂಬಂಧಿತ ನಿಯಮಗಳಲ್ಲಿ ಇದೇ ರೀತಿಯ ನಿಯಮ ಸೇರಿಸುವುದನ್ನು ಪರಿಗಣಿಸುವುದಕ್ಕಾಗಿ ತನ್ನ ಆದೇಶದ ಪ್ರತಿಯನ್ನು ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಕೊಲೆ ಯತ್ನ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್ ತನ್ನ ವಿರುದ್ಧ ಮಾಡಿದ್ದ ಪ್ರತಿಕೂಲ ಹೇಳಿಕೆ ತೆಗೆದುಹಾಕುವಂತೆ ಕೋರಿ ನ್ಯಾಯಾಂಗ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.
ಲಿಂಕ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅರ್ಜಿದಾರ ಸೆಷನ್ಸ್ ನ್ಯಾಯಾಧೀಶ ಈ ಹಿಂದೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದ್ದ ಹಿನ್ನೆಲೆಯಲ್ಲಿ ಸಮಾನತೆ ಆಧರಿಸಿ ಸಹ ಆರೋಪಿಗೆ ಜಾಮೀನು ನೀಡಿದ್ದರು. ಆದರೆ ದೂರುದಾರರು ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಮತ್ತೊಬ್ಬ ಸೆಷನ್ಸ್ ನ್ಯಾಯಾಧೀಶರು ಜಾಮೀನು ಆದೇಶ ರದ್ದುಗೊಳಿಸಿದ್ದರು.
ನಂತರ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಆರೋಪಿಗಳ ಕ್ರಿಮಿನಲ್ ಹಿನ್ನೆಲೆ ಗಮನಿಸದೆ ಜಾಮೀನು ನೀಡಿದ್ದಕ್ಕಾಗಿ ಅರ್ಜಿದಾರರಾಗಿರುವ ಸೆಷನ್ಸ್ ನ್ಯಾಯಾಧೀಶರನ್ನು ಹೈಕೋರ್ಟ್ ಏಕಸದಸ್ಯ ಪೀಠ ಟೀಕಿಸಿತ್ತು. ಆದರೆ ಹೀಗೆ ಟೀಕೆ ಮಾಡುವ ಮುನ್ನ ಸೆಷನ್ಸ್ ನ್ಯಾಯಾಧೀಶರ ವಾದ ಆಲಿಸಲು ಏಕಸದಸ್ಯ ಪೀಠ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯವಿಲ್ಲ ಎಂದ ಅದು ಆ ಕ್ರಮಗಳನ್ನು ತೆಗೆದುಹಾಕಿ ಹೈಕೋರ್ಟ್ ಆದೇಶ ಮಾರ್ಪಡಿಸಿತು.
[ತೀರ್ಪಿನ ಪ್ರತಿ]