
ಲೈಂಗಿಕ ಅಪರಾಧಗಳನ್ನು ಕ್ಷುಲ್ಲಕಗೊಳಿಸುವ ಹೈಕೋರ್ಟ್‌ಗಳದ್ದು ʼನಾಟಕವೇ ವಿನಾ ಬೇರೇನೂ ಅಲ್ಲ, ಇದನ್ನು ಖಂಡಿಸಬೇಕಿದೆʼ ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಸುಪ್ರೀಂಕೋರ್ಟನ್ನು ಕೋರಿದ್ದಾರೆ.
ನ್ಯಾಯಾಧೀಶರಿಗೆ ಲಿಂಗತ್ವ ಜಾಗೃತಿ ತರಬೇತಿ ನೀಡುವುದು ತಕ್ಷಣದ ಅಗತ್ಯ ಎಂದು ಹೇಳಿರುವ ಅವರು ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯ ವೇಳೆ ಲಿಂಗತ್ವ ಜಾಗೃತಿ ಕುರಿತು ವಿಷಯವೊಂದನ್ನು ಅಳವಡಿಸಬೇಕು. ಜೊತೆಗೆ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ರಾಜ್ಯ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿಯ ವಿಷಯವಾಗಿ ಅದನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಎಸಗಿದವ ರಾಖಿ ಕಟ್ಟಿಸಿಕೊಂಡರೆ ಜಾಮೀನು ನೀಡುವುದಾಗಿ ಹೇಳಿದ್ದ ಮಧ್ಯಪ್ರದೇಶ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ 9 ಮಂದಿ ವಕೀಲೆಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಸಂಜೀವ್ ಖನ್ನಾ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠವು ಸೋಮವಾರ ವಿಚಾರಣೆ ನಡೆಸಿತು. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳ ವರ್ತನೆ ಹೇಗಿರಬೇಕೆಂಬ ಕುರಿತಂತೆ ವೇಣುಗೋಪಾಲ್ ಅವರ ಮಾತು ಹೀಗಿತ್ತು:
ಅವರ ವಾದದ ಪ್ರಮುಖಾಂಶಗಳು ಹೀಗಿವೆ:
ಲಿಂಗತ್ವ ಜಾಗೃತಿ ಮತ್ತು ಕುಂದುಕೊರತೆ ಪರಿಹಾರ ಸಮಿತಿಗಳು ಸುಪ್ರೀಂಕೋರ್ಟಿನಲ್ಲಿದ್ದು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳು ಹಾಗೂ ಹೈಕೋರ್ಟ್‌ಗಳಿಗೆ ಇವು ಲಿಂಗತ್ವ ಜಾಗೃತಿ ಕುರಿತು ಉಪನ್ಯಾಸಗಳನ್ನು ನೀಡಬೇಕಿದೆ.
ನ್ಯಾಯಾಧೀಶರ ನೇಮಕಾತಿ ಸಂದರ್ಭದಲ್ಲಿ ಲಿಂಗತ್ವ ಜಾಗೃತಿಯನ್ನು ಒಂದು ವಿಷಯವಾಗಿ ಅಳವಡಿಸಿಕೊಳ್ಳಬೇಕು.
ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ರಾಜ್ಯ ನ್ಯಾಯಾಂಗ ಅಕಾಡೆಮಿಗಳು ಲಿಂಗತ್ವ ಜಾಗೃತಿ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ಸಮಿತಿಯ ಮಟ್ಟಿಗೆ ಹೇಳುವುದಾದರೆ ರಾಜ್ಯ ಮಾಹಿತಿ ವ್ಯವಸ್ಥೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ರವಾನೆ ಮಾಡಬೇಕು ಅದು ಅಧೀನ ನ್ಯಾಯಾಲಯಗಳಿಗೆ ತಲುಪುತ್ತದೆ.
ಜಾಮೀನು ನೀಡಲು ನ್ಯಾಯಾಧೀಶರುಗಳು ಅಂತಹ ಷರತ್ತು ವಿಧಿಸುವುದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿಸುವಂತೆ ಸುಪ್ರೀಂಕೋರ್ಟ್ ಅವರಿಗೆ ಮತ್ತು ಸಂಬಂಧಪಟ್ಟವರಿಗೆ ನೋಟಿಸ್ ಕೂಡ ನೀಡಿದೆ. ಇದೇ ವೇಳೆ ಪ್ರಕರಣದಲ್ಲಿ ಮಧ್ಯಪ್ರವೇಶಕಾರರಾದ 96 ವರ್ಷದ ಮಾಜಿ ನ್ಯಾಯಾಧೀಶರು ಮತ್ತು 84 ವರ್ಷದ ಹಿರಿಯ ವಕೀಲರ ಪರ ಹಾಜರಾದ ಹಿರಿಯ ವಕೀಲ ದುಶ್ಯಂತ್ ದವೆ ಅವರಿಗೆ ಲಿಖಿತ ರೂಪದಲ್ಲಿ ಅಹವಾಲು ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿತು. ನ.27ರ ಹೊತ್ತಿಗೆ ನ್ಯಾಯಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಏನಿದು ಪ್ರಕರಣ?
ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಆರೋಪಿಗೆ ಜಾಮೀನು ನೀಡಿದ್ದ ಮಧ್ಯಪ್ರದೇಶ ಹೈಕೋರ್ಟ್, ಜಾಮೀನು ನೀಡುವ ವೇಳೆ ಷರತ್ತೊಂದನ್ನು ವಿಧಿಸಿತ್ತು. ಇದರನ್ವಯ ʼಆರೋಪಿ ಆಗಸ್ಟ್ 3ರಂದು ಬೆಳಿಗ್ಗೆ 11 ಗಂಟೆಗೆ ತನ್ನ ಹೆಂಡತಿ ಜೊತೆಗೆ ಸಂತ್ರಸ್ತೆಯ ಮನೆಗೆ ತೆರಳಿ ಸಿಹಿ ಹಂಚಬೇಕು. ಸಂತ್ರಸ್ತೆಯ ಕೈಯಲ್ಲಿ ರಾಖಿ ಕಟ್ಟಿಸಿಕೊಳ್ಳಬೇಕು. ಜೊತೆಗೆ ಯಾವತ್ತಿಗೂ ಆಕೆಗೆ ತನ್ನ ಕೈಲಾದಷ್ಟು ರಕ್ಷಣೆ ನೀಡುವುದಾಗಿ ಪ್ರಮಾಣ ಮಾಡಬೇಕು. ಅಲ್ಲದೆ ಅಣ್ಣಂದಿರು, ತಂಗಿಯರಿಗೆ ಸಾಂಪ್ರದಾಯಿಕವಾಗಿ ಕೊಡುವಂತೆ ರೂ 11,000 ಮೊತ್ತವನ್ನು ನೀಡಬೇಕು. ಜೊತೆಗೆ ಆಕೆಯ ಆಶೀರ್ವಾದವನ್ನೂ ಪಡೆಯಬೇಕುʼ ಎಂದು ಮಧ್ಯಪ್ರದೇಶ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಅಪರ್ಣಾ ಭಟ್ ನೇತೃತ್ವದಲ್ಲಿ ಒಂಬತ್ತು ಮಂದಿ ವಕೀಲೆಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸಂತ್ರಸ್ತೆಯ ಮನೆಗೆ ಆರೋಪಿ ಹೋಗಿ ರಾಖಿ ಕಟ್ಟಿಸಿಕೊಳ್ಳಬೇಕೆಂದು ಹೇಳಿರುವುದು ಆಕೆಯ ಸ್ವಂತ ಮನೆಯಲ್ಲಿಯೇ ಪಾತಕ ಎಸಗಲು ಅವಕಾಶ ಮಾಡಿಕೊಡಬಹುದು ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿತ್ತು. ಆದರೂ ಜಾಮೀನಿನ ಕುರಿತಂತೆ ತಾವು ಯಾವುದೇ ಪ್ರಶ್ನೆ ಎತ್ತುತ್ತಿಲ್ಲ ಬದಲಿಗೆ ರಾಖಿ ಕಟ್ಟುವ ಷರತ್ತನ್ನು ಮಾತ್ರ ಪ್ರಶ್ನಿಸುತ್ತಿರುವುದಾಗಿ ವಕೀಲೆಯರು ತಿಳಿಸಿದ್ದರು.