ಮಹಿಳೆಗೆ ಅಧಿಕ ಸಾಲದ ಹೊರೆ: ಚಿಟ್ ಫಂಡ್ ಪರ ನೀಡಿದ್ದ ಆದೇಶ ರದ್ದುಗೊಳಿಸಿದ ಮಂಗಳೂರು ಸೆಷನ್ಸ್ ನ್ಯಾಯಾಲಯ

ದಾಖಲೆಗಳ ಪ್ರಕಾರ ಮಹಿಳೆ ಚಿಟ್‌ ಫಂಡ್‌ಗ ರೂ 88,434ರಷ್ಟು ಸಾಲ ಪಾವತಿಸಬೇಕಿದ್ದರೂ ಆಕೆ ರೂ 1,24,500/- ಹಣ ನೀಡುವಂತೆ ಚೆಕ್ ಬರೆಸಿಕೊಂಡಿರುವ ಬಗ್ಗೆ ನ್ಯಾಯಾಲಯ ಪ್ರಶ್ನೆ ಎತ್ತಿತು.
ಮಹಿಳೆಗೆ ಅಧಿಕ ಸಾಲದ ಹೊರೆ: ಚಿಟ್ ಫಂಡ್ ಪರ ನೀಡಿದ್ದ ಆದೇಶ ರದ್ದುಗೊಳಿಸಿದ ಮಂಗಳೂರು ಸೆಷನ್ಸ್ ನ್ಯಾಯಾಲಯ
A1

ಮಹಿಳೆಯೊಬ್ಬರು ಮರುಪಾವತಿಸಬೇಕಿದ್ದ ಚಿಟ್‌ ಮೊತ್ತಕ್ಕೆ ಹೆಚ್ಚುವರಿ ಸಾಲದ ಹಣ ಸೇರಿಸಿದ್ದ ಚಿಟ್‌ ಫಂಡ್‌ ಕಂಪೆನಿ ಪರವಾಗಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಈಚೆಗೆ ರದ್ದುಗೊಳಿಸಿದೆ.

“ಚಿಟ್‌ ಫಂಡ್‌ ಹೆಚ್ಚುವರಿಯಾಗಿ ಸೇರಿಸಿರುವ ಮೊತ್ತ ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಸಾಲವಾಗಿರಲಿಲ್ಲ. ಇದನ್ನು ಚಿಟ್‌ ಫಂಡ್‌ ಕಂಪೆನಿ ಹೆಚ್ಚುವರಿಯಾಗಿ ಸೇರಿಸಿದೆ. ಹೀಗಾಗಿ  ಅಮಾನ್ಯಗೊಂಡ ಚೆಕ್‌ ನೆಗೋಷಿಯಬಲ್‌ ಇನ್‌ಸ್ಟ್ರುಮೆಂಟ್‌ ಕಾಯಿದೆಯ ಸೆಕ್ಷನ್‌ 138ರ ಅಡಿ ಅಪರಾಧವನ್ನು ಆಕರ್ಷಿಸುವುದಿಲ್ಲ” ಎಂದು ದಕ್ಷಿಣ ಕನ್ನಡ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಪ್ರೀತಿ ಕೆ ಪಿ ಅವರು ತಿಳಿಸಿದ್ದಾರೆ.

ಈ ಅಂಶಗಳನ್ನು ವಿಚಾರಣಾ ನ್ಯಾಯಾಲಯ ನಿರ್ಲಕ್ಷಿಸಿದ್ದು ಕಾಯಿದೆಯ ಸೆಕ್ಷನ್‌ 138ರ ಅಡಿ ಆರೋಪಿ ಮಹಿಳೆ ತಪ್ಪಿತಸ್ಥೆ ಎಂದು ದೂರುದಾರರು ಸಾಬೀತುಪಡಿಸಿದ್ದಾರೆ ಎಂಬ ತಪ್ಪು ನಿರ್ಣಯಕ್ಕೆ ಬಂದಿದೆ ಎಂದು ವಿವಿಧ ಅಂಶಗಳ ಮೂಲಕ 18-08-2023ರಂದು ನೀಡಿರುವ ಆದೇಶದಲ್ಲಿ ಸೆಷನ್ಸ್‌ ನ್ಯಾಯಾಲಯ ತಿಳಿಸಿದೆ.  

ಈ ಹಿನ್ನೆಲೆಯಲ್ಲಿ ಖಾಸಗಿ ಚಿಟ್‌ ಫಂಡ್‌ ಕಂಪೆನಿಯಿಂದ ಹಣ ಪಡೆದಿದ್ದ ಮಹಿಳೆಯ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆಕೆಯನ್ನು ತಪ್ಪಿತಸ್ಥೆ ಎಂದು ಘೋಷಿಸಿದ್ದ ಮಂಗಳೂರಿನ ಜೆಎಂಎಫ್‌ಸಿ IX ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿತು. ಆ ಮೂಲಕ ಕಾಯಿದೆಯ ಸೆ. 138ರ ಅಡಿ ಹೂಡಲಾಗಿದ್ದ ಪ್ರಕರಣದಿಂದ ಆಕೆಯನ್ನು ಖುಲಾಸೆಗೊಳಿಸಿತು.

ಲತಾ ಗಣೇಶ್‌ ಎಂಬ ಮಹಿಳೆ ಮಂಗಳೂರಿನ ಸುಗ್ಗಿ ಚಿಟ್ಸ್‌  ಖಾಸಗಿ ಕಂಪೆನಿಯಿಂದ ತಿಂಗಳಿಗೆ ರೂ.50,000 ದಂತೆ 30 ತಿಂಗಳಲ್ಲಿ ಪಾವತಿಸುವುದಾಗಿ ತಿಳಿಸಿ ರೂ.15,00,000/- ಹಣವನ್ನು ಚಿಟ್‌ ಮೊತ್ತವಾಗಿ ಪಡೆದಿದ್ದರು. ಬಳಿಕ ಆಕೆ ಚಿಟ್‌ ಮೊತ್ತ ಪಾವತಿಸದೆ ಸುಸ್ತಿದಾರರಾದುದರಿಂದ ಚಿಟ್‌ ಕಂಪೆನಿ ಹಣ ಮರುಪಾವತಿಸುವಂತೆ ಆರೋಪಿ ಮಹಿಳೆಗೆ ಆಗ್ರಹಿಸಿತು.  ಚಿಟ್‌ ಕಂಪೆನಿ ಹೆಸರಿಗೆ ಮಹಿಳೆ ರೂ.1,24,500/- ಮೊತ್ತ ನಮೂದಿಸಿ ಚೆಕ್‌ ನೀಡಿದರು. ಆದರೆ ಮಹಿಳೆಯ ಖಾತೆಯಲ್ಲಿ ಅಷ್ಟು ಮೊತ್ತದ ನಗದು ಇರದೇ ಇದ್ದುದರಿಂದ ಖಾಸಗಿ ಬ್ಯಾಂಕ್‌ನಲ್ಲಿ ಚೆಕ್‌ ಅಮಾನ್ಯಗೊಂಡಿತು.

ಮತ್ತೊಂದೆಡೆ ತಾನು ಬಡ್ಡಿಯೊಂದಿಗೆ ರೂ.10,10,395/- ಪಾವತಿಸಿದ್ದು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಮಹಿಳೆ ವಿಚಾರಣಾ ನ್ಯಾಯಾಲಯದಲ್ಲಿ ದಾಖಲೆಗಳ ಸಹಿತ ಸಮರ್ಥಿಸಿಕೊಂಡಿದ್ದರು. ಮುಖ್ಯವಾದ ವಿಚಾರ ಎಂದರೆ ದೂರು ನೀಡಿದ್ದ ಚಿಟ್‌ ಕಂಪೆನಿಯ ಲೆಡ್ಜರ್‌ನಲ್ಲಿ ಆರೋಪಿ ಪಾವತಿಸಬೇಕಾದ ಬಾಕಿ ಮೊತ್ತ ರೂ 88,434/- ಎಂದಿದೆ ಎಂಬುದನ್ನು ಸೆಷನ್ಸ್‌ ನ್ಯಾಯಾಲಯ ಗಮನಿಸಿತು.

ದೂರು ನೀಡಿರುವ ಚಿಟ್‌ ಕಂಪೆನಿ ಖಾಸಗಿ ಸಂಸ್ಥೆಯಾಗಿದ್ದು ತಾನು ನೀಡಿದ ಸಾಲದ ಖಾತೆಗಳನ್ನು ಸಂಪೂರ್ಣ ನಿರ್ವಹಿಸುವ ಅಗತ್ಯವಿದೆ ಎಂದಿರುವ ನ್ಯಾಯಾಲಯ ದಾಖಲೆಗಳ ಪ್ರಕಾರ ರೂ 88,434ರಷ್ಟು ಸಾಲ ಪಾವತಿಸಬೇಕಿದ್ದರೂ ರೂ 1,24,500/- ಹಣ ನೀಡುವಂತೆ ಮಹಿಳೆಯಿಂದ ಚೆಕ್‌ ಬರೆಸಿಕೊಂಡಿರುವ ಬಗ್ಗೆ ಪ್ರಶ್ನೆ ಎತ್ತಿತು. ದಂಡದ ಬಡ್ಡಿಯನ್ನು ಅದಕ್ಕೆ ಸೇರಿಸುವ ಅಗತ್ಯವಿದೆ ಎಂದು ಚಿಟ್‌ ಫಂಡ್‌ ಕಂಪೆನಿ ಹೇಳಿಕೊಂಡರೂ ದಂಡದ ಬಡ್ಡಿ ದರ ಮತ್ತು ಲೆಕ್ಕಾಚಾರದ ವಿವರವನ್ನು ಅದು ಬಹಿರಂಗಪಡಿಸಿಲ್ಲ ಎಂದು ನ್ಯಾಯಾಲಯ ಪ್ರಧಾನವಾಗಿ ಬೆರಳು ಮಾಡಿದೆ.

Related Stories

No stories found.
Kannada Bar & Bench
kannada.barandbench.com